​ದ.ಕ. ಜಿಲ್ಲಾಧಿಕಾರಿಯ ವರ್ಗಾವಣೆಗೆ ಕಾರಣ ತಿಳಿಸಿ: ಯು.ಟಿ. ಖಾದರ್

Update: 2020-07-30 17:23 GMT

ಮಂಗಳೂರು, ಜು.30: ದ.ಕ. ಜಿಲ್ಲೆಯಲ್ಲಿ ಕೊರೋನ, ಮಳೆಗಾಲದ ಸಮಸ್ಯೆ ಇರುವಾಗಲೇ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ. ಅದಕ್ಕೆ ಕಾರಣ ಏನು ಎಂದು ಸರಕಾರ ಬಹಿರಂಗಪಡಿಸಬೇಕು ಎಂದು ಮಾಜಿ ಸಚಿವ ಯುಟಿ ಖಾದರ್ ಆಗ್ರಹಿಸಿದ್ದಾರೆ.

ನಗರದ ಮಲ್ಲಿಕಟ್ಟೆಯಲ್ಲಿರುವ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ‘ಇದು ಖಾದರ್ ಕಾಲವಲ್ಲ’ ಹೇಳಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿರುವಾಗ ಜಿಲ್ಲೆಯಲ್ಲಿ 6 ತಿಂಗಳಿಗೊಮ್ಮೆ ಯಾವ ಅಧಿಕಾರಿಗಳನ್ನು ಕೂಡ ವರ್ಗಾವಣೆ ಮಾಡಿಲ್ಲ, ಯಾವ ಅಧಿಕಾರಿಯೂ ರಾಜೀನಾಮೆ ಕೊಟ್ಟು ಹೋಗಿಲ್ಲ ಎಂದು ತಿರುಗೇಟು ನೀಡಿದರು.

ದ.ಕ. ಜಿಲ್ಲಾಧಿಕಾರಿಗೆ ಹಾಕಲಾದ ಬೆದರಿಕೆಯನ್ನು ಉಸ್ತುವಾರಿ ಸಚಿವರು ಖಂಡಿಸಿಲ್ಲ. ಪ್ರಕರಣದ ಆರೋಪಿಗಳಿಗೆ ಜಾಮೀನು ನೀಡಲಾಗಿದೆ. ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರೊಬ್ಬರು, ಅಧಿಕಾರ ಚಲಾಯಿಸುವವರು ಇನ್ನೊಬ್ಬರು ಎಂದು ವ್ಯಂಗ್ಯವಾಡಿದ ಖಾದರ್, ಕಾಂಗ್ರೆಸ್ ಸರಕಾರವಿರುವಾಗ ಬೋಫೋರ್ಸ್ ಖರೀದಿಸಿದ್ದರಿಂದ ಕಾರ್ಗಿಲ್ ಗೆಲ್ಲುವಂತಾಯಿತು. ದೇಶಕ್ಕೆ ಆಗಮಿಸಿದ ‘ರೆಫೇಲ್’ ವಿಮಾನ ಕಾಂಗ್ರೆಸ್ ಸರಕಾರದ ಕೊಡುಗೆ. ಬಿಜೆಪಿ ಸರಕಾರ ಅದನ್ನು ಮೂರು ಪಟ್ಟು ಹೆಚ್ಚಳಕ್ಕೆ ಖರೀದಿಸಿದೆ. ಪ್ಲಾಸ್ಟಿಕ್ ವಿಮಾನ ಮಾಡದ ಸಂಸ್ಥೆಗೆ ರಫೇಲ್ ಜವಾಬ್ದಾರಿ ನೀಡಲಾಗಿದೆ ಎಂದು ಆರೋಪಿಸಿದರು.

ಡಿಕೆಶಿಗೆ ಸ್ವಾಗತ: ಕರ್ನಾಟಕ ಪ್ರದೇಶ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಡಿ.ಕೆ. ಶಿವಕುಮಾರ್ ಮೊದಲ ಬಾರಿಗೆ ದ.ಕ. ಜಿಲ್ಲೆಗೆ ಆಗಮಿಸುತ್ತಿದ್ದು, ಅವರನ್ನು ಜಿಲ್ಲಾ ಕಾಂಗ್ರೆಸ್‌ನಿಂದ ಆತ್ಮೀಯವಾಗಿ ಬರಮಾಡಿಕೊಳ್ಳಲಾಗುವುದು ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ತಿಳಿಸಿದರು.

ಡಿಕೆ ಶಿವಕುಮಾರ್ ಜು.31ರಂದು ಬೆಳಗ್ಗೆ 10ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಕೇಂದ್ರದ ಮಾಜಿ ಸಚಿವರಾದ ಆಸ್ಕರ್ ಫೆರ್ನಾಂಡೀಸ್‌ರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಲಿದ್ದಾರೆ. ಬಳಿಕ ಬಿಷ‌ಪ್ ಹೌಸ್‌ನಲ್ಲಿ ಬಿಷಪ್‌ರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲಿದ್ದಾರೆ. ಅಲ್ಲಿಂದ ಕಂಕನಾಡಿಗೆ ತೆರಳಿ ರಿಕ್ಷಾ ಚಾಲಕರ ಸಂಘದ ಪದಾಧಿಕಾರಿಗಳನ್ನು ಭೇಟಿ ನೀಡಿ ಅಹವಾಲು ಸ್ವೀಕರಿಸಲಿದ್ದಾರೆ. ನಂತರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಆನಂತರ ಕೋವಿಡ್ ವಾರಿಯರ್ಸ್‌ ಆಗಿ ಸೇವೆ ಸಲ್ಲಿಸುತ್ತಿರುವ ಪಕ್ಷದ 60 ಮಂದಿ ಪ್ರತಿನಿಧಿಗಳ ಜತೆ ಸಮಾಲೋಚನೆ ನಡೆಸುವರು ಎಂದರು.

ಮಧ್ಯಾಹ್ನ ಬಳಿಕ ಖಾಝಿ ಬೇಕಲ್ ಉಸ್ತಾದ್ ಅವರ ಮುಡಿಪುವಿನಲ್ಲಿರುವ ಮನೆಗೆ ಭೇಟಿ ನೀಡಿ ಆಶೀರ್ವಾದ ಪಡೆದು, ಅಲ್ಲಿಂದ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿಯ ಬಂಟ್ವಾಳದ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಲಿದ್ದಾರೆ. ಆನಂತರ ಧರ್ಮಸ್ಥಳಕ್ಕೆ ತೆರಳಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಶನಿವಾರ ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣ ಮೂಲಕ ಬೆಂಗಳೂರಿಗೆ ಮರಳಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರಾದ ಐವನ್ ಡಿಸೋಜ, ಜೆ.ಆರ್. ಲೋಬೊ, ಕಾರ್ಪೊರೇಟರ್ ಪ್ರವೀಣ್‌ಚಂದ್ರ ಆಳ್ವ, ಕವಿತಾ ಸನಿಲ್, ವಿಶ್ವಾಸ್‌ಕುಮಾರ್ ದಾಸ್, ಎ.ಸಿ.ವಿನಯರಾಜ್, ಸದಾಶಿವ ಉಳ್ಳಾಲ್, ಮುಹಮ್ಮದ್ ಕುಂಜತ್ತಬೈಲ್ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News