ಬೆಳ್ತಂಗಡಿ: ಡ್ರೋನ್ ಮೂಲಕ ಸಾವಯವ ಸ್ಯಾನಿಟೈಸರ್ ಸಿಂಪಡನೆಗೆ ಚಾಲನೆ

Update: 2020-07-30 17:32 GMT

ಬೆಳ್ತಂಗಡಿ: ಕೊರೋನ ನಿಯಂತ್ರಣಕ್ಕೆ ರಾಜ್ಯಾದ್ಯಂತ ಒಂದು ಸಾವಿರ ಯುವಕರ ತಂಡ ಒಂದು ಸಾವಿರ ಗ್ರಾಮಗಳಲ್ಲಿ ಕೊರೋನ ಸೋಂಕು ನಿವಾರಣೆಗೆ ಅತ್ಯಾಧುನಿಕ ಮಟ್ಟದ ಡ್ರೋನ್ ಮೂಲಕ ಸಾವಯವ ಸ್ಯಾನಿಟೈಸರ್ ಸಿಂಪಡಿಸುವ ಕಾರ್ಯ ಇದೊಂದು ಸಮಾಜಕ್ಕೆ ಮಾದರಿ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಅವರು ಗುರುವಾರ ಶ್ರೀಕ್ಷೇತ್ರ ಧರ್ಮಸ್ಥಳದ ಪ್ರವಚನ ಮಂಠಪದಲ್ಲಿ ತಮಿಳುನಾಡಿನ ಡಾ. ಕಾರ್ತಿಕ್ ನಾರಾಯಣ್ ಮತ್ತು ಚೆನೈನ ಅಣ್ಣ ವಿಶ್ವವಿದ್ಯಾಲಯದ ನಿರ್ದೇಶಕ ಡಾ. ಸಿಂಥಿಲ್ ಕುಮಾರ್ ನೇತೃತ್ವದ ಸುಧಾರಾಧನಾ ತಂಡ ಮತ್ತು ಎಸ್‌ಪಿ ರವಿ ಚೆನ್ನಣ್‌ರವರ ಮಾರ್ಗದರ್ಶನದಲ್ಲಿ ಕೊರೋನ ಸೋಂಕು ತಡೆಗೆ ಡ್ರೋನ್ ಮೂಲಕ ಸಾವಯವ ಸ್ಯಾನಿಟೈಸರ್ ಸಿಂಪಡನೆಗೆ ಚಾಲನೆ ನೀಡಿ ಮಾತನಾಡಿದರು.

ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಶಿಷ್ಯರಾದ ಡಾ. ಕಾರ್ತಿಕ್ ನಾರಾಯಣ್ ಮಾತನಾಡಿ, 16 ಲೀಟರ್ ದ್ರವ ತುಂಬಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದು ನಿರಂತರ ಐದು ಘಂಟೆಗಳ ಕಾಲ ಬಳಸಬಹುದು. ಚೆನೈನ ಅಣ್ಣ ವಿಶ್ವವಿದ್ಯಾಲಯದ ಎಂ.ಐ.ಟಿಯಲ್ಲಿ ನಿರ್ಮಿಸಲಾದ ಬ್ಯಾಟರಿಚಾಲಿತ ಡ್ರೋನ್ ಇದರಲ್ಲಿದ್ದು ಯಾವುದೇ ಕಟ್ಟಡದ ಹೊರಾವರಣವನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಬಹುದು. ಈ ಯೋಜನೆಯ ಕಲ್ಪನೆಯು ಚೆನೈ, ತಮಿಳುನಾಡು ಹಾಗೂ ಇತರೆಡೆ ಈಗಾಗಲೇ ಅತ್ಯಂತ ಪರಿಣಾಮಕಾರಿ ಯಶಸ್ವಿಯಾಗಿ ಬಳಕೆಯಾಗಿದೆ. ಈ ಡ್ರೋನ್ ಮೂಲಕ ಸಾವಯವ ದ್ರವ ಸಿಂಪಡನೆ ಮಾಡಲಾಗಿದೆ. ರಾಜ್ಯದಲ್ಲಿ ಪ್ರಥಮವಾಗಿ ಧರ್ಮಸ್ಥಳ ಗ್ರಾಮವನ್ನು ಆಯ್ಕೆಮಾಡಿಕೊಂಡು ಸ್ಯಾನಿಟೈಸ್ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಧ.ಗ್ರಾ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್ ಹೆಚ್ ಮಂಜುನಾಥ್, ಧರ್ಮಸ್ಥಳ ಗ್ರಾ.ಪಂ ಆಡಳಿತಾಧಿಕಾರಿ ಡಾ. ಕೆ. ಜಯಕೀರ್ತಿ ಜೈನ್, ಧರ್ಮಸ್ಥಳ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಉಮೇಶ್, ಸಿಬ್ಬಂದಿ ಡಾ. ದೇವಿಪ್ರಸಾದ್, ಮತ್ತು ಧರ್ಮಸ್ಥಳದ ಸಿಬ್ಬಂದಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News