ಕರಾವಳಿಯಾದ್ಯಂತ ‘ಬಕ್ರೀದ್’ ಆಚರಣೆ

Update: 2020-07-31 04:09 GMT

ಮಂಗಳೂರು, ಜು.31: ಪ್ರವಾದಿ ಇಬ್ರಾಹೀಂ (ಅ) ಮತ್ತು ಅವರ ಪುತ್ರ ಇಸ್ಮಾಯೀಲ್ (ಅ) ಅವರ ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಶುಕ್ರವಾರ ಕರಾವಳಿಯಾದ್ಯಂತ ಆಚರಿಸುತ್ತಿದ್ದಾರೆ.

ಕೋವಿಡ್ -19 ಹಿನ್ನೆಲೆಯಲ್ಲಿ ಬಕ್ರೀದ್ ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಲು ಸರಕಾರ ಹೊರಡಿಸಿದ ಮಾರ್ಗಸೂಚಿಯಂತೆ ಸುರಕ್ಷಿತ ಅಂತರ ಕಾಪಾಡುವುದರೊಂದಿಗೆ ಮಸೀದಿಗಳಲ್ಲಿ ಸಾಮೂಹಿಕವಾಗಿ ಈದ್ ನಮಾಝ್ ನಿರ್ವಹಿಸಲಾಯಿತು.

ಜಿಲ್ಲೆಯ ಬಹುತೇಕ ಮಸೀದಿಗಳಲ್ಲಿ ಆಯಾ ಮಸೀದಿಯ ವ್ಯಾಪ್ತಿಯ ಮುಸ್ಲಿಮರು ನಮಾಝ್ ನಿರ್ವಹಿಸಿದರು. ಈದ್ಗಾದಲ್ಲಿ ಸಾಮೂಹಿಕ ನಮಾಝ್ ಮತ್ತು ಈದ್ ಖುತ್ಬಾಕ್ಕೆ ನಿರ್ಬಂಧ ವಿಧಿಸಲಾದ ಕಾರಣ ಇದೇ ಮೊದಲ ಬಾರಿಗೆ ಮಂಗಳೂರು ಸಹಿತ ಜಿಲ್ಲೆಯ ಯಾವುದೇ ಈದ್ಗಾಗಳಲ್ಲಿ ನಮಾಝ್, ಈದ್ ಖುತ್ಬಾ ನಡೆಯಲಿಲ್ಲ. ಬಹುತೇಕ ಮಸೀದಿಗಳಲ್ಲಿ ತಲಾ 50 ಮಂದಿಯಂತೆ ಸರದಿ ಸಾಲಿನಲ್ಲಿ ನಮಾಝ್ ನಿರ್ವಹಿಸಿದರು. 60 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 10 ವರ್ಷ ಪ್ರಾಯಕ್ಕಿಂತ ಕೆಳಗಿನ ಮಕ್ಕಳು ಮಸೀದಿಗೆ ಪ್ರವೇಶಿಸಲು ಅವಕಾಶ ಇರಲಿಲ್ಲ.

ಮಸೀದಿ ಹೊರತುಪಡಿಸಿ ಇತರ ಯಾವುದೇ ಸ್ಥಳಗಳಲ್ಲಿ ಅಂದರೆ ಸಭಾಂಗಣ, ಸಮುದಾಯ ಭವನ, ಶಾದಿಮಹಲ್ ಮತ್ತಿತರ ತೆರೆದ ಜಾಗಗಳಲ್ಲಿ ಕೂಡ ಬಕ್ರೀದ್ ಸಾಮೂಹಿಕ ಪ್ರಾರ್ಥನೆಗೆ ವಿಧಿಸಲಾದ ನಿರ್ಬಂಧವನ್ನು ಪಾಲಿಸಲಾಯಿತು. 

ಪ್ರತಿಯೊಬ್ಬರೂ ಮಾಸ್ಕ್ ಧರಿಸಿದ್ದರು. ಕೆಲವು ಮಸೀದಿಗಳಲ್ಲಿ ಪ್ರವೇಶಿಸುವ ಮುನ್ನ ದೇಹದ ತಾಪಮಾನ ತಪಾಸಣೆ ಮಾಡಲಾಯಿತು. ಕೈಗಳನ್ನು ಸೋಪು ಅಥವಾ ಸ್ಯಾನಿಟೈಸರ್‌ನಿಂದ ಶುಚಿಗೊಳಿಸಿದರು. ನಮಾಝ್ ನಿರ್ವಹಿಸಲು ಮನೆಯಿಂದಲೇ ಮುಸಲ್ಲಾವನ್ನು ಕೊಂಡೊಯ್ದಿದ್ದರು. ಹಸ್ತಲಾಘವ ಅಥವಾ ಆಲಿಂಗನಕ್ಕೂ ಅವಕಾಶವಿರಲಿಲ್ಲ.

ಕರಾವಳಿ ತೀರದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ದ.ಕ. ಮತ್ತು ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ಮಸೀದಿಗಳಲ್ಲಿ ಸಾಮೂಹಿಕ ನಮಾಝ್, ಈದ್ ಖುತ್ಬಾ ಮತ್ತು ಈದ್ ಸಂದೇಶ ನಡೆಯಿತು. ಗುರುವಾರ ರಾತ್ರಿಯಿಂದಲೇ ಮಸೀದಿಗಳಲ್ಲಿ ತಕ್ಬೀರ್ ಧ್ವನಿ ಮೊಳಗುತ್ತಿದೆ. ಮಕ್ಕಳ ಸಹಿತ ಎಲ್ಲರೂ ಹೊಸ ಬಟ್ಟೆ ಧರಿಸಿ ಸಂಭ್ರಮಿಸಿದರು.

ಆಲಿಂಗನಕ್ಕೆ ಅವಕಾಶ ಇಲ್ಲದಿದ್ದರೂ ಸಂಬಂಧಿಕರು, ಅಕ್ಕ-ಪಕ್ಕ ಮತ್ತು ಸ್ನೇಹಿತರ ಮನೆಗೆ ಸೌಹಾರ್ದದ ಭೇಟಿ ನೀಡಿ ಶುಭ ಹಾರೈಸುತ್ತಿದ್ದಾರೆ. ಕಬರ್ ಝಿಯಾರತ್‌ಗೆ ನಿರ್ಬಂಧ ವಿಧಿಸದ ಕಾರಣ ಅಗಲಿದವರಿಗೆ ಕುಟುಂಬದ ಸದಸ್ಯರು ಸುರಕ್ಷಿತ ಅಂತರ ಕಾಪಾಡುವ ಮೂಲಕ ಸಾಮೂಹಿಕವಾಗಿ ಕಬರ್ ಝಿಯಾರತ್ ನಡೆಸಿದರು.

ಮಂಗಳೂರಿನ ಬಾವುಟ ಗುಡ್ಡೆ ಈದ್ಗಾ ಮಸೀದಿ ಯಲ್ಲಿ ಬಕ್ರೀದ್ ಹಬ್ಬ ದಂದು ಸಾವಿರಾರು ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದು, ಈ ಬಾರಿ ಸಾರ್ವಜನಿಕ ಪ್ರಾರ್ಥನೆಗೆ ಸರಕಾರದ ನಿರ್ಬಂಧದ ಮೇರೆಗೆ ಈದ್ಗಾ ಮಸೀದಿ ಬಿಕೋ ಅನ್ನುತ್ತಿತ್ತು.
ಕುದ್ರೋಳಿಯ ನಡುಪಳ್ಳಿಯಲ್ಲಿ ಸುರಕ್ಷಿತ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಮುಸ್ಲಿಂ ಬಾಂಧವರು ನಮಾಝ್ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News