ಬೆಳ್ತಂಗಡಿ: ಆಶಾ ಕಾರ್ಯಕರ್ತೆ ಮೇಲೆ ಪತಿಯಿಂದಲೇ ಹಲ್ಲೆ

Update: 2020-07-31 12:20 GMT

ಬೆಳ್ತಂಗಡಿ, ಜು.31: ಕೊರೊನ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆಯ ಆದೇಶದಂತೆ ಸರ್ವೆಗೆ ಹೋಗುತ್ತಿದ್ದ ಆಶಾ ಕಾರ್ಯಕರ್ತೆ ಮೇಲೆ ಆಕೆಯ ಪತಿ ಹಲ್ಲೆ ನಡೆಸಿದ ಘಟನೆ ಜು.31ರಂದು ಮಧ್ಯಾಹ್ನ ಕಳಿಯ ಗ್ರಾಮದ ಪೇಲತ್ತಳಿಕೆಯಲ್ಲಿ ನಡೆದಿದೆ.

ಕಳಿಯ ಗ್ರಾಮದ ಗೇರುಕಟ್ಟೆ ಬಾಕಿಮಾರು ನಿವಾಸಿ ಸುರೇಶ್ ಹಲೆ ನಡೆಸಿದವರೆಂದು ತಿಳಿದು ಬಂದಿದೆ. ಪುದುವೆಟ್ಟು ಗ್ರಾಮದ ಅರಸೋಲಿಗೆ ನೆರೋಳುಪಳಿಕೆ ನಿವಾಸಿ ಆಶಾ ಕಾರ್ಯಕರ್ತೆ ಶ್ರೀಮತಿ ಭವಾನಿ ಹಲ್ಲೆಗೊಳಗಾಗಿದ್ದು, ತಲೆಗೆ ಗಂಭೀರ ಗಾಯಗೊಂಡ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊರೊನ ಹಿನ್ನಲೆಯಲ್ಲಿ ಕಳಿಯ ಗ್ರಾಮದಲ್ಲಿ ಭವಾನಿ ಮತ್ತು ಎರುಕಡಪು ಅಂಗನವಾಡಿ ಕಾರ್ಯಕರ್ತೆ ಗುಣವತಿ ಅವರು ಮನೆ ಭೇಟಿ ಸಮಯದಲ್ಲಿ ಪೆಲತ್ತಳಿಕೆ ಎಂಬಲ್ಲಿ ಸುರೇಶ್ ಅಡ್ಡ ಗಟ್ಟಿ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಹಲ್ಲೆಯನ್ನು ತಡೆಯಲು ಯತ್ನಿಸಿದಾಗ ಜೊತೆಯಲ್ಲಿದ್ದ ಅಂಗನವಾಡಿ ಕಾರ್ಯಕರ್ತೆಗೂ ಕೈ ಮಾಡಲು ಮುಂದಾದಾಗ ಸ್ಥಳೀಯರು ಬೊಬ್ಬೆ ಕೇಳಿ ಓಡಿ ಬಂದು ಬಿಡಿಸಿದರೆನ್ನಲಾಗಿದೆ. ಹಲ್ಲೆ ನಡೆಸಿದ ಸುರೇಶ್ ಅಲ್ಲಿಂದ ಪರಾರಿಯಾಗಿದ್ದಾರೆ. ಕೂಡಲೇ ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲು ಸಹಕರಿದ್ದಾರೆ.

ಭವಾನಿ ಹಾಗೂ ಆಕೆಯ ಪತಿಗೆ ವೈಮನಸ್ಸಿದ್ದು, ಭವಾನಿ ಪತಿಯನ್ನು ತೊರೆದು ಪುದುವೆಟ್ಟಿನ ತನ್ನ ತಾಯಿ ಮನೆಯಲ್ಲಿ ಇಬ್ಬರು ಅವಳಿ ಪುತ್ರಿಯರ ಜೊತೆ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News