ಉಡುಪಿ: ಆ.1ರಿಂದ ಕ್ವಾರಂಟೈನ್ ಪ್ರದೇಶ ಸಂಪೂರ್ಣ ‘ಲಾಕ್‌ಡೌನ್’

Update: 2020-07-31 12:44 GMT

ಉಡುಪಿ, ಜು.31: ಜಿಲ್ಲೆಯಲ್ಲಿ ನೋವೆಲ್ ಕೊರೋನ ವೈರಸ್ (ಕೋವಿಡ್-19) ಸೋಂಕು ಹರಡುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಪಾಸಿಟಿವ್ ಬಂದಿರುವ ವ್ಯಕ್ತಿಗಳ ಮನೆ ಹಾಗೂ ಕಚೇರಿಗಳ ಸುತ್ತಮುತ್ತ ರಚಿಸಲಾಗುವ ಕಂಟೈನ್‌ಮೆಂಟ್ ವಲಯಗಳಲ್ಲಿ ನಾಳೆಯಿಂದ ಅಂದರೆ ಆಗಸ್ಟ್ 1ರಿಂದ ಸಂಪೂರ್ಣ ಲಾಕ್‌ಡೌನ್ ಇರುತ್ತದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಿಸಿದ್ದಾರೆ.

ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಂಟೈನ್‌ಮೆಂಟ್ ವಲಯಗಳಲ್ಲಿ ಕೆಲವೊಂದು ನಿರ್ಬಂಧನೆಗಳನ್ನು ವಿಧಿಸಲು ಹಾಗೂ ಕಂಟೈನ್‌ಮೆಂಟ್ ಹೊರವಲಯಗಳಲ್ಲಿ ಕೆಲವೊಂದು ಚಟುವಟಿಕೆಗಳ ನಿರ್ಬಂಧಗಳನ್ನು ಸಡಿಲಗೊಳಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

ಇದರಂತೆ ಕಂಟೈನ್‌ಮೆಂಟ್ ವಲಯಗಳಲ್ಲಿ ಆಗಸ್ಟ್ 1ರಿಂದ 31ರವರೆಗೆ ಸಂಪೂರ್ಣ ಲಾಕ್‌ಡೌನ್ ಇರುತ್ತದೆ. ಆದರೆ ವೈದ್ಯಕೀಯ ತುರ್ತುಸೇವೆಗಳು ಮತ್ತು ಅವಶ್ಯಕತೆಗಳು ಹಾಗೂ ಅಗತ್ಯ ವಸ್ತುಗಳು, ಸೇವೆಗಳ ಪೂರೈಕೆಗಳನ್ನು ನಿರ್ವಹಿಸಲು ಅನುಮತಿ ನೀಡಲಾಗಿದೆ. ಇವುಗಳ ಹೊರತು ಕಂಟೈನ್‌ಮೆಂಟ್ ವಲಯದ ಒಳಗೆ ಹಾಗೂ ಹೊರಗೆ ಜನರ ಚಲನವಲನಗಳನ್ನು ನಿಷೇಧಿಸಲಾಗಿದೆ ಎಂದವರು ಹೇಳಿದ್ದಾರೆ.

ಕಂಟೈನ್‌ಮೆಂಟ್ ವಲಯಗಳ ಹೊರಗಿನ ಪ್ರದೇಶದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿದ ಸೂಚನೆ ಹಾಗೂ ಕಾರ್ಯಾಚರಣೆ ಗಳನ್ನು ನಡೆಸಲು ಅನುಮತಿ ನೀಡಲಾಗಿದೆ. ಈ ಪ್ರದೇಶಗಳಲ್ಲಿ ಆ.31ರವರೆಗೆ ಯಾವುದೇ ಶಾಲಾ-ಕಾಲೇಜುಗಳು, ಶಿಕ್ಷಣ ಸಂಸ್ಥೆಗಳು, ಸಿನೆಮಾ ಮಂದಿರಗಳು, ಈಜುಕೊಳಗಳು, ಉದ್ಯಾನವನ, ಚಿತ್ರಮಂದಿರ, ಅಸೆಂಬ್ಲಿ ಹಾಲ್, ಸಭಾಂಗಣ ಗಳು ತೆರೆಯುವಂತಿಲ್ಲ.

ಸಾರ್ವಜನಿಕರು ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮುಖಗವಸುಗಳನ್ನು ಕಡ್ಡಾಯವಾಗಿ ಧರಿಸಬೇಕು ಹಾಗೂ ಸುರಕ್ಷತಾ ಅಂತರವನ್ನು ಕಾಪಾಡಬೇಕು. 65 ವರ್ಷ ಮೇಲ್ಪಟ್ಟ ಹಿರಿಯರು, 10 ವರ್ಷಕ್ಕಿಂತ ಕೆಳಗಿನ ಮಕ್ಕಳು, ಗರ್ಭಿಣಿ ಯರು, ಅಸ್ವಸ್ಥರು ಮನೆಯಿಂದ ಹೊರಗೆ ಬರಬಾರದು. ಎಲ್ಲಾ ಸಾಮಾನ್ಯ ಪ್ರದೇಶಗಳಲ್ಲಿ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಥರ್ಮಲ್ ಸ್ಕಾನಿಂಗ್, ಕೈತೊಳೆಯಲು ವ್ಯವಸ್ಥೆ ಹಾಗೂ ಸ್ಯಾನಿಟೈಸರ್‌ಗೆ ಅವಕಾಶ ಕಲ್ಪಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಆದೇಶವನ್ನು ಪಾಲಿಸದಿದ್ದಲ್ಲಿ, ಅಥವಾ ಉಲ್ಲಂಘಿಸಿದವರ ಮೇಲೆ ಪೊಲೀಸ್ ಠಾಣೆಗಳಲ್ಲಿ ವಿಕೋಪ ನಿರ್ವಹಣೆ ಕಾಯ್ದೆ 2005, ಸಾಂಕ್ರಾಮಿಕ ರೋಗಗಳ ಕಾಯ್ದೆ 1897 ಹಾಗೂ ಐಪಿಸಿ ಸೆಕ್ಷನ್ 188ರ ಅಡಿ ಮೊಕದ್ದಮೆ ದಾಖಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳ ಆದೇಶ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News