×
Ad

ಉಪ್ಪಿನಂಗಡಿ: ಕೋವಿಡ್ ವರದಿ ನೆಗೆಟಿವ್ ಬಂದಿದ್ದರೂ ಕೊರೋನ ಸೋಂಕಿತರಂತೆ ಶವ ಸಂಸ್ಕಾರ

Update: 2020-08-01 00:06 IST
ಸಾಂದರ್ಭಿಕ ಚಿತ್ರ

ಉಪ್ಪಿನಂಗಡಿ: ಹಿಂದೊಮ್ಮೆ ಕೊರೋನ ಪಾಸಿಟಿವ್ ಬಂದು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದ ಉಪ್ಪಿನಂಗಡಿ ರಥಬೀದಿಯ ನಿವಾಸಿ ಚಿಕಿತ್ಸೆಯ ಬಳಿಕ ನೆಗೆಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಮನೆಗೆ  ಹಿಂದಿರುಗಿದ ಮೂರೇ ದಿನದಲ್ಲಿ ಸಾವನ್ನಪ್ಪಿದ ಘಟನೆ ಗುರುವಾರ ರಾತ್ರಿ ನಡೆದಿದ್ದು, ಕೊರೋನ ಭೀತಿಯ ಹಿನ್ನೆಲೆಯಲ್ಲಿ ವ್ಯಕ್ತಿಯ ಶವ ಸಂಸ್ಕಾರವನ್ನು ಕೊರೋನ ಸೋಂಕಿತರ ಶವ ಸಂಸ್ಕಾರದಂತೆ ನಡೆಸಲಾದ ವಿದ್ಯಾಮಾನ ಉಪ್ಪಿನಂಗಡಿಯಲ್ಲಿ ನಡೆದಿದೆ.

ಗಂಟಲ ಕ್ಯಾನ್ಸರ್ ಪೀಡಿತನಾಗಿದ್ದ 58 ರ ಹರೆಯದ ವ್ಯಕ್ತಿ ಮಂಗಳೂರಿನ ಖಾಸಗಿ  ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ವೇಳೆ ಕೊರೋನ ಸೋಂಕು  ತಗಲಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ  ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಪಡೆದು ಬಳಿಕ ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಬಂದ ಕಾರಣ ಕಳೆದ ಮೂರು ದಿನಗಳ ಹಿಂದೆ ಅವರು ಮನೆಗೆ ಹಿಂದುರಿಗಿದ್ದರು. ಈ ಮಧ್ಯೆ ಅವರ ಕ್ಯಾನ್ಸರ್ ರೋಗ ಉಲ್ಬಣಿಸಿ ಗುರುವಾರ ರಾತ್ರಿ ಅವರು ನಿಧನರಾದರು.

ಪ್ರಕರಣವನ್ನು ಆರೋಗ್ಯ ಇಲಾಖಾಧಿಕಾರಿಗಳ ಗಮನಕ್ಕೆ ತಂದಾಗ , ವ್ಯಕ್ತಿಯ ಕೊರೋನ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಸಹಜ ಅಂತ್ಯ ಸಂಸ್ಕಾರ  ನಡೆಸಬಹುದೆಂದು ತಿಳಿಸಲಾಯಿತಾದರೂ, ಸ್ಥಳೀಯರು ಕೊರೋನ ಸೋಂಕಿನ ಬಗ್ಗೆ  ಸಂಶಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶವ ಸಂಸ್ಕಾರದ ವಿಧಿವಿಧಾನವನ್ನು ಸರಕಾರ ಸೂಚಿಸಿದ ಮಾರ್ಗಸೂಚಿಯಂತೆ ಪಿಪಿಇ ರಕ್ಷಾ ಕವಚ  ಧರಿಸಿ ಉಪ್ಪಿನಂಗಡಿಯ ರುದ್ರ ಭೂಮಿಯಲ್ಲಿ ನಡೆಸಲಾಯಿತು.

ಸ್ಥಳದಲ್ಲಿ ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದು, ಅಗತ್ಯ ಮಾರ್ಗದರ್ಶನ ನೀಡಿದರು. ಸ್ಥಳೀಯ ಗಣ್ಯರಾದ ಎನ್ ಉಮೇಶ್ ಶೆಣೈ , ಪದ್ಮನಾಭ ಕಾಮತ್, ವಿನಾಯಕ ಪೈ, ಯು.ಟಿ. ಮಹಮ್ಮದ್ ತೌಸಿಫ್  ಮೊದಲಾದವರು ಸಹಕಾರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News