ಪಚ್ಚನಾಡಿ ಪೌರ ಕಾರ್ಮಿಕರಿಗೆ ಮೀಸಲಿಟ್ಟ ಜಾಗದ ವಿವಾದ: ಅಕ್ರಮ ಕಟ್ಟಡ ತೆರವಿಗೆ ಕಾಂಗ್ರೆಸ್ ಮುಖಂಡರ ಒತ್ತಾಯ

Update: 2020-08-01 12:35 GMT

ಮಂಗಳೂರು, ಆ.1: ನಗರ ಪಾಲಿಕೆ ವ್ಯಾಪ್ತಿಗೊಳಪಡುವ ಪಚ್ಚನಾಡಿಯಲ್ಲಿ ಪೌರ ಕಾರ್ಮಿಕರಿಗೆ ಮೀಸಲಿಟ್ಟ ಜಾಗದಲ್ಲಿ ದಾಖಲೆಗಳಿಲ್ಲದೆ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಅವುಗಳನ್ನು ತೆರವುಗೊಳಿಸಿ ಅದನ್ನು ಅರ್ಹ ಪೌರ ಕಾರ್ಮಿಕರಿಗೆ ಒದಗಿಸಬೇಕು ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಒತ್ತಾಯಿಸಿದೆ.

ಈ ಬಗ್ಗೆ ಸ್ಥಳೀಯರಿಂದ ಬಂದ ದೂರಿನ ಮೇರೆಗೆ ಮಾಜಿ ಸಚಿವರಾದ ಅಭಯ ಚಂದ್ರ ಜೈನ್, ಮಾಜಿ ಶಾಸಕರಾದ ಐವನ್ ಡಿಸೋಜಾ, ಜೆ.ಆರ್. ಲೋಬೊ, ಮೊಯ್ದಿನ್ ಬಾವ, ಮಾಜಿ ಮೇಯರ್ ಕವಿತಾ ಸನಿಲ್ ತಂಡ ಸೇರಿದಂತೆ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಅಲ್ಲಿ ಅಕ್ರಮ ವಾಗಿ ಕಟ್ಟಡ ನಿರ್ಮಿಸಲಾಗುತ್ತಿರುವುದು ಕಂಡು ಬಂದಿದೆ ಎಂದು ಶಾಸಕ ಯು.ಟಿ. ಖಾದರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರಿಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಲಾಗುವುದು. ಸ್ಥಳೀಯ ಮನಪಾ ಸದಸ್ಯರು ಹಾಗೂ ಸ್ಥಳೀಯ ಶಾಸಕರ ಬೆಂಬಲದಿಂದಲೇ ಈ ಅಕ್ರಮ ಕಟ್ಟಡ ತಲೆ ಎತ್ತಿದ್ದು ಎಂದು ಆರೋಪಿಸಿದ ಅವರು, ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಪೌರ ಕಾರ್ಮಿಕರಿಗೆ ಆ ಜಾಗವನ್ನು ನೀಡಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಪಚ್ಚನಾಡಿಯ ಕಾರ್ಮಿಕ ಕಾಲನಿ ರಸ್ತೆ ಬದಿಯಲ್ಲೇ ಹಾಡುಹಗಲೇ ಕುಮ್ಮಿ ಅರಣ್ಯ ಪ್ರದೇಶದ ಮರಗಳನ್ನು ಕಡಿದು ಸಾಗಿಸುತ್ತಿರು ವುದು ಪರಿಶೀಲನೆಯ ವೇಳೆ ಕಂಡು ಬಂದಿದೆ. ಅರಣ್ಯ ಇಲಾಖೆ, ಪೊಲೀಸ್ ಹಾಗೂ ಕಂದಾಯ ಇಲಾಖೆಯ ಬೆಂಬಲವಿಲ್ಲದೆ ಈ ರೀತಿ ಮರ ಗಳನ್ನು ಕಡಿದು ಸಾಗಿಸಲು ಸಾಧ್ಯವೇ ಎಂದು ಪ್ರಶ್ನಿಸಿದ ಯು.ಟಿ.ಖಾದರ್, ಈ ಬಗ್ಗೆ ಕಠಿಣ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.

ಮಾಜಿ ಶಾಸಕ ಮೊಯ್ದಿನ್ ಬಾವ ಮಾತನಾಡಿ, ಪೌರ ಕಾರ್ಮಿಕರಿಗೆ ನೀಡಲಾಗಿದ್ದ ಜಾಗದಲ್ಲಿ ಬೇರೆಯವರಿಗೆ ಮನೆ ಕಟ್ಟಿ ಒದಗಿಸುವುದು ಹೇಗೆ ? ಎಂದು ಪ್ರಶ್ನಿಸಿದರು.

ಕಾರ್ಮಿಕ ಕಾಲನಿಯಲ್ಲಿನ ಮರ ಕಡಿದು ಸಾಗಿರುವುದು ಒಂದೆಡೆಯಾದರೆ, ಆ ಸ್ಥಳದಲ್ಲಿ ಗೂಂಡಾಗಿರಿಯೊಂದಿಗೆ ಸ್ಥಳೀಯ ಮಾಲಕರನ್ನು ಬೆದರಿಸಿ ಜಾಗದಲ್ಲಿ ಬೇರೆಯವರಿಗೆ ಮನೆ ಕಟ್ಟಿಕೊಡಲು ಮುಂಗಡವನ್ನು ಪಡೆಯುವ ಕಾರ್ಯವೂ ಆಗಿದೆ ಎಂದು ಮೊಯ್ದಿನ್ ಬಾವ ಆರೋಪಿಸಿದರು.

ಗೋಷ್ಠಿಯಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಮೇಯರ್ ಕವಿತಾ ಸನಿಲ್, ಮುಖಂಡರಾದ ಸದಾಶಿವ ಉಳ್ಳಾಲ್, ಶುಭೋದಯ ಆಳ್ವ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News