×
Ad

ಸಾಮಾಜಿಕ ಜಾಲತಾಣದಲ್ಲಿ ಅಂಬೇಡ್ಕರ್‌ಗೆ ಅವಹೇಳನ: ಆರೋಪಿ ವಿರುದ್ಧ ಕ್ರಮಕ್ಕೆ ದಸಂಸ ಮನವಿ

Update: 2020-08-01 18:12 IST

ಉಡುಪಿ, ಆ.1: ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅವಹೇಳನ ಕಾರಿಯಾಗಿ ಬರೆದಿರುವ ಹಾಗೂ ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನು ಬದಲಿಸಬೇಕೆಂದು ಪೋಸ್ಟ್  ಮಾಡಿರುವ ಲಕ್ಷ್ಮೀಕಾಂತ್ ಬೈಂದೂರ್ ಎಂಬವರ ವಿರುದ್ಧ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ಸಲ್ಲಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಲಾಯಿತು.

ಫೇಸ್‌ಬುಕ್ ಬಳಕೆದಾರನಾದ ಲಕ್ಷೀಕಾಂತ ಬೈಂದೂರು ಎನ್ನುವ ವ್ಯಕ್ತಿ ಈ ಹಿಂದೆ ತನ್ನ ಫೇಸ್‌ಬುಕ್ ಖಾತೆಯಲ್ಲಿ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಬದಲಿಸಬೇಕು ಎಂದು ಪೋಸ್ಟ್ ಮಾಡಿದ್ದು ಅಲ್ಲದೆ, ಕೆಲವು ದಿನಗಳ ಹಿಂದೆ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಮಹಾನಾಯಕ’ ಧಾರಾವಾಹಿಯನ್ನು ಪ್ರಸಾರ ಮಾಡಬಾರದೆಂದೂ; ಅದು ಮೇಲ್ವರ್ಗದವರ ಮೇಲೆ ದ್ವೇಷ ಹುಟ್ಟಿಸುವಂತಿದೆ ಅಂತ ಅಸ್ಪ್ರಶ್ಯತೆಯನ್ನು ಪ್ರೇರೇಪಿಸುವ ಪೋಸ್ಟ್ ಮಾಡಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಮಿತಿಯ ಜಿಲ್ಲಾ ದಸಂಸ ಸಂಚಾಲಕ ಸುಂದರ್ ಮಾಸ್ಟರ್, ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ, ಭಾಸ್ಕರ ಮಾಸ್ಟರ್, ಪರಮೇಶ್ವರ ಉಪ್ಪೂರು, ಶ್ಯಾಮ್‌ಸುಂದರ ತೆಕ್ಕಟ್ಟೆ, ತಾಲೂಕು ಸಂಚಾಲಕ ಶಂಕರದಾಸ್,ಶ್ರೀಧರ ಕುಂಜಿಬೆಟ್ಟು, ನಾಗರಾಜ್ ಎಂ.ಜಿ, ಶ್ರೀಪತಿ ಕುಂಜಿಬೆಟ್ಟು, ಜಗದೀಶ್ ಗಂಗೊಳ್ಳಿ, ನ್ಯಾಯವಾದಿಗಳಾದ ಸಜನ್ ಎಂ.ಎಸ್. ತೆಕ್ಕಟ್ಟೆ, ಆನಂದ್.ಕೆ. ಗಂಗೊಳ್ಳಿ, ಸಂಪತ್ ಗಂಗೊಳ್ಳಿ ಉಪಸ್ಥಿತರಿದ್ದರು.

ಈ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರು ಸೂಕ್ತ ಕ್ರಮದ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News