ಕಾಂಗ್ರೆಸ್ ಮುಖಂಡ ಐವನ್ ಡಿಸೋಜ, ವೈದ್ಯೆ ಪತ್ನಿಗೂ ಕೊರೋನ ದೃಢ

Update: 2020-08-01 15:12 GMT

ಮಂಗಳೂರು, ಆ.1: ಕಾಂಗ್ರೆಸ್‌ನ ಹಿರಿಯ ಮುಖಂಡ, ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್ ಡಿಸೋಜ ಹಾಗೂ ಅವರ ಪತ್ನಿಗೆ ಕೊರೋನ ಸೋಂಕು ತಗುಲಿರುವುದು ಶನಿವಾರ ದೃಢಪಟ್ಟಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜು.31ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜೊತೆ ಮಂಗಳೂರು, ಕುದ್ರೋಳಿ, ಸಹಿತ ಜಿಲ್ಲೆಯ ಹಲವೆಡೆ ಐವನ್ ಭೇಟಿ ನೀಡಿದ್ದಾರೆ. ಇವರ ಜೊತೆಗಿದ್ದವರು ಮತ್ತು ಅವರು ಭೇಟಿ ನೀಡಿರುವ ಮನೆಗಳಲ್ಲಿ ಸೋಂಕು ಹರಡಿರುವ ಭೀತಿ ಎದುರಾಗಿದೆ.

ಡಿ.ಕೆ.ಶಿವಕುಮಾರ್ ಅವರು ಮಂಗಳೂರಿಗೆ ಭೇಟಿ ನೀಡಿದ್ದು, ಹಲವು ಧಾರ್ಮಿಕ, ರಾಜಕೀಯ ಮುಖಂಡರನ್ನು ಭೇಟಿ ಮಾಡಿದ್ದರು. ಶಾಸಕರು, ಮಾಜಿ ಸಚಿವರು ಸಹಿತ ಪಕ್ಷದ ಹಲವು ಮುಖಂಡರು, ಕಾರ್ಯಕರ್ತರ ಜೊತೆ ಐವನ್ ಡಿಸೋಜ ಅವರೂ ಇದ್ದರೆಂದು ತಿಳಿದುಬಂದಿದೆ.
ಇದಾದ ಮರುದಿನವೇ(ಶನಿವಾರ), ‘ನನಗೆ ಹಾಗೂ ಪತ್ನಿಗೆ ಕೊರೋನ ಪಾಸಿಟಿವ್ ಬಂದಿದ್ದು, ನೀವೆಲ್ಲರೂ ಪ್ರಾರ್ಥಿಸಿ’ ಎಂದು ಐವನ್ ಟ್ವೀಟ್ ಮಾಡಿದ್ದಾರೆ.

ಐವನ್ ಪತ್ನಿಗೂ ಸೋಂಕು: ಐವನ್ ಡಿಸೋಜ ಅವರ ಪತ್ನಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ಕವಿತಾ ಡಿಸೋಜ ಅವರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಐವನ್ ಅವರು ಕಳೆದ ಎರಡು-ಮೂರು ದಿನಗಳ ಹಿಂದೆಯಷ್ಟೇ ನಗರದ ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ್ದರು. ಆಗ ಅವರ ಗಂಟಲು ದ್ರವ ಮಾದರಿಯು ನೆಗೆಟಿವ್ ಬಂದಿತ್ತು ಎನ್ನಲಾಗಿದೆ. ಆದರೆ ಶುಕ್ರವಾರ ಸಂಜೆ ಮತ್ತೊಮ್ಮೆ ಪರೀಕ್ಷೆಗೊಳಗಾದ ಹಿನ್ನೆಲೆಯಲ್ಲಿ ಶನಿವಾರದ ವರದಿಯಲ್ಲಿ ಪಾಸಿಟಿವ್ ಬಂದಿರುವುದು ಖಚಿತಪಟ್ಟಿದೆ.

ಐವನ್ ಅವರು ಇತ್ತೀಚೆಗೆ ಮಂಗಳೂರಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಕಂಕನಾಡಿಯಲ್ಲಿ ಆಟೊ ರಿಕ್ಷಾ ಚಾಲಕರು ಮತ್ತು ಕಾರ್ಮಿಕರಿಗೆ ಸ್ಯಾನಿಟೈಝರ್, ಮಾಸ್ಕ್ ವಿತರಿಸಿದ್ದರು. ಪಕ್ಷದ ಕಾರ್ಯಕರ್ತರ ಸಭೆಯಲ್ಲೂ ಪಾಲ್ಗೊಂಡಿದ್ದರು. ಅಲ್ಲದೆ, ಡಿಕೆಶಿ ಭೇಟಿ ನೀಡಿದ್ದ ಸಂದರ್ಭದಲ್ಲೂ ಐವನ್ ಇದ್ದರು. ಕಾಂಗ್ರೆಸ್ ಮುಖಂಡರು ಮಾತ್ರವಲ್ಲದೆ, ಅವರ ಜೊತೆಗಿದ್ದವರು, ಅವರು ಭೇಟಿ ನೀಡಿರುವ ಮನೆಯವರಲ್ಲೂ ಈಗ ಆತಂಕ ಆವರಿಸಿದೆ. ಜಿಲ್ಲಾಡಳಿತವು ಬಹುತೇಕ ಮಂದಿಯನ್ನು ಕ್ವಾರಂಟೈನ್‌ನಲ್ಲಿ ಇರಿಸುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News