ಸ್ಕಿಡ್ ಆಗಿ ಮಗುಚಿ ಬಿದ್ದ ಕಾರು: ಮಗು ಮೃತ್ಯು, ಎಂಟು ಮಂದಿಗೆ ಗಾಯ

Update: 2020-08-01 16:48 GMT

ಉಡುಪಿ, ಆ.1: ಮಂಗಳೂರಿನಿಂದ ಶಿಕಾರಿಪುರದತ್ತ ತೆರಳುತ್ತಿದ್ದ ಕಾರೊಂದು ಸ್ಕಿಡ್ ಆಗಿ ಡಿವೈಡರ್‌ನಲ್ಲಿದ್ದ ಕಂಬಕ್ಕೆ ಢಿಕ್ಕಿ ಹೊಡೆದು ಮಗುಚಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಎರಡು ವರ್ಷದ ಮಗುವೊಂದು ಮೃತಪಟ್ಟ ಘಟನೆ ಇಂದು ಮುಂಜಾನೆ 7:30ರ ಸುಮಾರಿಗೆ ಉಡುಪಿ ಅಂಬಲಪಾಡಿಯ ಮಹೇಂದ್ರ ಶೋರೂಂ ಎದುರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಅಪಘಾತದಲ್ಲಿ ಇತರ ಎಂಟು ಮಂದಿ ಗಾಯಗೊಂಡಿದ್ದಾರೆ. ಮನ್ಹಾ (2) ಮೃತಪಟ್ಟ ಮಗು.

ಶಿಕಾರಿಪುರದಲ್ಲಿ ಅನಾರೋಗ್ಯದಿಂದಿರುವ ತಮ್ಮ ಸಂಬಂಧಿಯನ್ನು ನೋಡಲು ಮಂಗಳೂರಿನ ಕುದ್ರೋಳಿಯ ತಜ್ವೀದ್(35) ತನ್ನ ಪತ್ನಿ ಮೊಹ್ಸಿನಾ ಬಾನು(25) ಹಾಗೂ ಇಬ್ಬರು ಮಕ್ಕಳೊಂದಿಗೆ ಬಾಡಿಗೆ ಕಾರಿನಲ್ಲಿ ತಾವೇ ಡ್ರೈವಿಂಗ್ ಮಾಡಿಕೊಂಡು ಹೊರಟಿದ್ದರು. ಕಾಪು ಮೂಳೂರಿನಲ್ಲಿ ಇವರ ಸಂಬಂಧಿ ಉಚ್ಚಿಲದ ಯಹ್ಯಾ (43) ತನ್ನ ಪತ್ನಿ ರಿಝ್ವಾನಾ (32) ಹಾಗೂ ಮೂವರು ಮಕ್ಕಳೊಂದಿಗೆ ಈ ಕಾರನ್ನೇರಿದ್ದರು. 

ಉಡುಪಿ ಅಂಬಲಪಾಡಿಯ ಮಹೇಂದ್ರ ಶೋರೂಮ್ ಬಳಿ ಬರುವಾಗ ವೇಗವಾಗಿ ಚಲಿಸುತ್ತಿದ್ದ ಕಾರು ಸ್ಕಿಡ್ ಆಗಿ ಡಿವೈಡರ್ ಮೇಲಿದ್ದ ದಾರಿದೀಪದ ಕಂಬಕ್ಕೆ ಢಿಕ್ಕಿ ಹೊಡೆದು ಮತ್ತೊಂದು ಬದಿ ಮಗುಚಿ ಬಿತ್ತೆನ್ನಲಾಗಿದೆ. ಇದರಿಂದ ಎರಡು ವರ್ಷದ ಹೆಣ್ಣು ಮಗು ಮನ್ಹಾರೊಂದಿಗೆ ಕುಳಿತಿದ್ದ ರಿಝ್ವಾನಾ ಗಂಭೀರ ಗಾಯಗೊಂಡಿದ್ದರು. ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನ್ಹಾ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿತು ಎಂದು ತಿಳಿದುಬಂದಿದೆ.

ಗಾಯಾಳುಗಳ ಪೈಕಿ ನಾಲ್ವರು ಮಕ್ಕಳನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News