ಆ.5: ರಾಮಮಂದಿರಕ್ಕೆ ಭೂಮಿಪೂಜೆ; ದ.ಕ.ದಲ್ಲಿ ವಿಶೇಷ ಪೂಜೆ

Update: 2020-08-01 15:45 GMT

ಮಂಗಳೂರು, ಆ.1: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಭವ್ಯ ರಾಮಮಂದಿರದ ಭೂಮಿಪೂಜೆಯು ಆ.5ರಂದು ನಡೆಯಲಿದ್ದು, ಇತ್ತ ದ.ಕ. ಜಿಲ್ಲೆಯಲ್ಲೂ ಮನೆಮನೆಯಲ್ಲಿ ದೀಪ ಹಚ್ಚುವುದು, ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ ತಿಳಿಸಿದ್ದಾರೆ.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಜನರ ಬಹುಬೇಡಿಕೆ ಹಾಗೂ ಹೋರಾಟದ ಪ್ರತಿಲವಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಅದರಂತೆ, ಜಿಲ್ಲೆಯಲ್ಲಿ ಮನೆ ಮನೆಯಲ್ಲಿ ದೀಪ ಹಚ್ಚುವುದು, ರಾಮನಾಮ ಪಠಣ ಜತೆಗೆ ಮಠಮಂದಿರಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನಡೆಸಲು ವಿನಂತಿಸಲಾಗುವುದು ಎಂದರು.

ಆ.5ರಂದು ಬೆಳಗ್ಗೆ 11:30ರಿಂದ 12:30ರವರೆಗೆ ಈ ಕಾರ್ಯಕ್ರಮವನ್ನು ಮನೆಯಲ್ಲೇ ಕೂತು ನೋಡುವ ಜತೆಗೆ ಮನೆಯಲ್ಲಿ ದೀಪ ಹಚ್ಚು ವುದು, ರಾಮನ ಜಪ ಪಠಣ, ಮಠ ಮಂದಿರಗಳಲ್ಲಿ ಈ ಸಮಯದಲ್ಲಿ ವಿಶೇಷ ಪೂಜೆ, ಪ್ರಾರ್ಥನೆಯ ವಿನಂತಿ ಮಾಡಲಾಗಿದೆ. ಈ ಮೂಲಕ ರಾಮಮಂದಿರ ನಿರ್ಮಾಣದ ಕಾರ್ಯ ವಿಘ್ನ ಇಲ್ಲದೇ ಸರಾಗವಾಗಿ ಸಾಗಬೇಕು ಎಂದರು.

ಏತನ್ಮಧ್ಯೆ, 1990 ಹಾಗೂ 1992ರಲ್ಲಿ ರಾಮಜನ್ಮಭೂಮಿಗೆ ಹೋರಾಟ ಮಾಡಿದ ಕರಸೇವಕರನ್ನು ಗುರುತಿಸಿ ಗೌರವಿಸುವ ಕಾರ್ಯ ನಡೆಯಲಿದೆ. ಈಗಾಗಲೇ ಸಂಘದಿಂದ ಅಂತಹ ಕರಸೇವಕರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಸಂಘ ಹಾಗೂ ಬಿಜೆಪಿ ಜತೆಯಾಗಿ ಈ ಕರ ಸೇವಕರನ್ನು ಗೌರವಿಸುತ್ತದೆ. ಈ ಸಂದರ್ಭ ಮಡಿದ ಕರಸೇವಕರಿಗೂ ಶ್ರದ್ಧಾಂಜಲಿ ಸಮರ್ಪಣೆ ನಡೆಯಲಿದೆ. ಈಗಾಗಲೇ ಎಂಟು ವಿಧಾನಸಭಾ ಕ್ಷೇತ್ರ ಸೇರಿದಂತೆ ಒಂಬತ್ತು ಮಂಡಲಗಳಿಗೆ ಈ ಕುರಿತು ಮಾಹಿತಿ ರವಾನಿಸಲಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭ ಬಿಜೆಪಿಯ ಮುಖಂಡರಾದ ಕಸ್ತೂರಿ ಪಂಜ, ರಾಧಾಕೃಷ್ಣ, ಜಗದೀಶ್ ಶೇಣವ, ಜಿತೇಂದ್ರ ಕೊಟ್ಟಾರಿ, ಸಂದೇಶ್ ಶೆಟ್ಟಿ, ರಣ್‌ದೀಪ್ ಕಾಂಚನ್, ಸುಧೀರ್ ಶೆಟ್ಟಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News