ಆ.5ರಂದು ಮನೆ-ಮನೆಗಳಲ್ಲಿ ದೀಪ ಬೆಳಗಲಿ: ಪೇಜಾವರಶ್ರೀ

Update: 2020-08-01 15:57 GMT

ನೀಲಾವರ (ಬ್ರಹ್ಮಾವರ), ಆ.1: ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರದ ನಿರ್ಮಾಣಕ್ಕಾಗಿ ಆ.5ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ದೇಶದ ಪ್ರತಿಯೊಬ್ಬ ಧರ್ಮಶ್ರದ್ಧೆಯುಳ್ಳ ಮನೆ-ಮನಸ್ಸುಗಳಲ್ಲಿ ಶ್ರೀರಾಮ-ಹನುಮ ಭಕ್ತಿ ನ್ಯಾಸಗೊಳ್ಳಬೇಕು ಎಂದು ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರು ಕರೆ ಕೊಟ್ಟಿದ್ದಾರೆ.

ನೀಲಾವರದಲ್ಲಿರುವ ಪೇಜಾವರ ಮಠದ ಗೋಶಾಲೆಯಲ್ಲಿ ಚಾರ್ತುಮಾಸ ವ್ರತದಲ್ಲಿರುವ ಪೇಜಾವರಶ್ರೀಗಳು, ಅಲ್ಲೇ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತಿದ್ದರು.

ಆ.5ರಿಂದ ಮಂದಿರ ನಿರ್ಮಾಣಕಾರ್ಯ ಪೂರ್ಣವಾಗುವವರೆಗೂ ದೇಶದ ಎಲ್ಲರ ಮನೆ ಮನೆಗಳಲ್ಲಿ ಮಂದಿರಗಳಲ್ಲಿ ಶ್ರೀರಾಮ ಹನುಮರ ವಿಶೇಷ ಸ್ಮರಣೆ ನಡೆಯಬೇಕು. ನಿತ್ಯ ಪ್ರಾರ್ಥನೆ ಭಜನೆ ಜಪ ಇತ್ಯಾದಿಗಳನ್ನು ನಡೆಸಬೇಕು. ಆ.5ರಂದು ಪ್ರತೀ ಮನೆ ಮಂದಿರ ದೇವಸ್ಥಾನ ಕಚೇರಿಗಳಲ್ಲಿ ಧಾರ್ಮಿಕ ವಾತಾವರಣ ಸೃಷ್ಟಿಸಬೇಕು. ದ್ವಾರಗಳಿಗೆ ಹೂವಿನ ಅಲಂಕಾರ ಮಾಡಬೇಕು ಎಂದು ಸ್ವಾಮೀಜಿ ಹೇಳಿದರು.

ಅಂದು ಬೆಳಗ್ಗೆ 11:30ರಿಂದ 12:30ರವರೆಗೆ ಕಾರ್ಯಕ್ರಮ ನಡೆಯಲಿದ್ದು, ಆ ಹೊತ್ತಿನಲ್ಲಿ ಮನೆ ಕಚೇರಿಗಳಲ್ಲಿ ರಾಮನಿಗಾಗಿ ತೈಲ ದೀಪಗಳನ್ನು ಬೆಳಗಬೇಕು. ರಾಮನಾಮ ಜಪಿಸಬೇಕು. ಮಠ ಮಂದಿರ ದೇವಳಗಳಲ್ಲಿ ವಿಶೇಷ ಪೂಜೆ ನೆರವೇರಿಸಬೇಕು. ಸಮಸ್ತ ಲೋಕದ ಒಳಿತಿಗಾಗಿ ಪ್ರಾರ್ಥಸಬೇಕು ಎಂದು ಶ್ರೀ ಕರೆ ನೀಡಿದರು.

ಆ.5 ಶ್ರೀರಾಘವೇಂದ್ರ ಗುರುಸಾರ್ವಭೌಮರ ಆರಾಧನೆಯೂ ಆಗಿರುವುದ ರಿಂದ ನೀಲಾವರದ ಗೋಶಾಲೆಯಲ್ಲಿ ಬೆಳಗ್ಗೆ ನೀಲಾವರ ಗೋಶಾಲೆಯಲ್ಲಿ ನಮ್ಮ ಆರಾಧ್ಯಮೂರ್ತಿ ಶ್ರೀ ರಾಮ - ಕೃಷ್ಣ- ವಿಠಲ ದೇವರಿಗೆ ಲಕ್ಷ ತುಲಸೀ ಅರ್ಚನೆ ನಡೆಯಲಿದೆ ಎಂದ ಪೇಜಾವರಶ್ರೀ, ತಾವು ಚಾತುರ್ಮಾಸ್ಯ ವ್ರತ ನಿಮಿತ್ತ ಅಯೋಧ್ಯೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಿಹಿಂಪನ ಜಿಲ್ಲಾಧ್ಯಕ್ಷ ಪಿ.ವಿಷ್ಣುಮೂರ್ತಿ ಆಚಾರ್ಯ, ಬಜರಂಗದಳದ ಪ್ರಾಂತ ಸಹ ಸಂಚಾಲಕ ಸುನಿಲ್ ಕೆ.ಆರ್. ಹಾಗೂ ವಿಹಿಂಪ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News