ಗುರುಪುರ ಗ್ರಾಪಂಗೆ ಆರ್‌ಡಿಪಿಆರ್ ಕಾರ್ಯದರ್ಶಿ ಭೇಟಿ

Update: 2020-08-01 16:50 GMT

ಮಂಗಳೂರು, ಆ.1: ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ (ಆರ್‌ಡಿಪಿಆರ್) ಪ್ರಧಾನ ಕಾರ್ಯದರ್ಶಿ ಎಲ್.ಕೆ. ಆತಿಕ್ ಗುರುಪುರ ಗ್ರಾಮ ಪಂಚಾಯತ್‌ಗೆ ಶನಿವಾರ ಭೇಟಿ ನೀಡಿ ಸಮಗ್ರ ಪ್ರಗತಿ ಬಗ್ಗೆ ಪರಿಶೀಲನೆ ನಡೆಸಿದರು.

ಗುರುಪುರ ಗ್ರಾಮದಲ್ಲಿ ಫಲ್ಗುಣಿ ನದಿ ಹರಿಯುತ್ತಿದ್ದು, ಇಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಆದ್ಯತೆ ನೀಡಿದರೆ ಗ್ರಾಮವಾಸಿಗಳಿಗೆ ವರ್ಷಪೂರ್ತಿ ಕುಡಿಯುವ ನೀರು ಪೂರೈಸಲು ಸಾಧ್ಯವಿದೆ. ಬೋರ್‌ವೆಲ್‌ಗಳು ಬರಿದಾಗುತ್ತಿದ್ದು, ಬಹುಗ್ರಾಮ ಕುಡಿಯುವ ನೀರು ಯೋಜನೆ ಇದಕ್ಕೆ ಪರ್ಯಾಯವಾಗಲಿದೆ. ಸರಕಾರಿ ಮಟ್ಟದಲ್ಲಿ ಈ ಬಗ್ಗೆ ಕಾರ್ಯಯೋಜನೆಯ ಸಾಧ್ಯಾಸಾಧ್ಯತೆ ಕುರಿತು ಗುರುಪುರ ಗ್ರಾಪಂ ಉಪಾಧ್ಯಕ್ಷ ಜಿ.ಎಂ. ಉದಯ ಭಟ್, ತಾಪಂ ಸಚಿನ್ ಅಡಪ, ಪಿಡಿಒ ಅಬೂಬಕರ್ ಪ್ರಧಾನ ಕಾರ್ಯದರ್ಶಿಯವರೊಂದಿಗೆ ಚರ್ಚಿಸಿದರು.

ಜಿಪಂ ಮತ್ತು ತಾಪಂ ಅನುದಾನದಲ್ಲಿ ಗ್ರಾಮಗಳಲ್ಲಿ ಕೊರೆದಿರುವ ಪ್ರತಿಯೊಂದು ಬೋರ್‌ವೆಲ್‌ಗಳಿಗೆ ಗ್ರಾಮ ಪಂಚಾಯತ್‌ಗೆ ಲಭ್ಯವಿರುವ ಅನುದಾನದಲ್ಲಿ ಮೆಸ್ಕಾಂ ವಿದ್ಯುತ್ ಬಿಲ್(ಐದು ಲಕ್ಷ ರೂ.) ಭರಿಸಲು ಕಷ್ಟವಾಗುತ್ತಿದ್ದು, ಸರಕಾರವೇ ಈ ಮೊತ್ತ ಭರಿಸುವಂತಹ ವ್ಯವಸ್ಥೆ ಯಾಗಬೇಕು ಎಂದು ಚರ್ಚಿಸಲಾಯಿತು.

ಮೆಚ್ಚುಗೆಗೆ ಪಾತ್ರವಾದ ಗ್ರಾಪಂ: ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೊರೋನ ಪಾಸಿಟಿವ್ ಮಾಹಿತಿ ಕೇಳಿದ ಪ್ರಧಾನ ಕಾರ್ಯದರ್ಶಿ ಆತಿಕ್, 65 ವರ್ಷ ದಾಟಿದ ವೃದ್ಧರ ಆರೋಗ್ಯ ಸ್ಥಿತಿಗತಿ ಬಗ್ಗೆ ಆಶಾ ಕಾರ್ಯಕರ್ತೆಯರು ಪಡೆದುಕೊಂಡ ಮಾಹಿತಿ ಮೇಲೆ ಕಣ್ಣಾಡಿಸಿದರು. ಗುರುಪುರ ಗ್ರಾಪಂ ಕಾರ್ಯವೈಖರಿ ಬಗ್ಗೆ ಅತೀವ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಗುರುಪುರ ಗ್ರಾಪಂ ಉಪಾಧ್ಯಕ್ಷ ಜಿ.ಎಂ. ಉದಯ ಭಟ್, ತಾಪಂ ಸದಸ್ಯ ಸಚಿನ್ ಅಡಪ, ಪಿಡಿಒ ಅಬೂಬಕರ್, ದಕ ಜಿಪಂ ಸಿಇಒ ಸೆಲ್ವಮಣಿ, ಡಿಎಸ್ ಉಪ-ಕಾರ್ಯದರ್ಶಿ ಆನಂದ ಕುಮಾರ್, ಜಿಪಂ ಕಾರ್ಯನಿರ್ವಹಣಾ ಇಂಜಿನಿಯರ್ ನರೇಂದ್ರ ಬಾಬು, ಜಿಪಂ ಸಹಾಯಕ ಕಾರ್ಯನಿರ್ವಹಣಾ ಇಂಜಿನಿಯರ್ ರೋಹಿದಾಸ್, ಜಿಪಂ ಕಿರಿಯ ಇಂಜಿನಿಯರ್ ಪ್ರದೀಪ್, ತಾಪಂ ಇಒ ಸದಾನಂದ ಸಪಲಿಗ, ಗ್ರಾಪಂ ಕಾರ್ಯದರ್ಶಿ ಅಶೋಕ್, ಲೆಕ್ಕ ಸಹಾಯಕ ನಿತ್ಯಾನಂದ, ಪಂಚಾಯತ್ ಸದಸ್ಯ ಯಶವಂತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News