ಭಾರತ ಸೇರಿ 31 ದೇಶಗಳಿಗೆ ವಿಮಾನ ಸಂಚಾರ ನಿಷೇಧಿಸಿದ ಕುವೈತ್

Update: 2020-08-02 04:03 GMT

ಹೊಸದಿಲ್ಲಿ : ಕೊರೋನ ವೈರಸ್ ತಡೆಯುವ ಪ್ರಯತ್ನವಾಗಿ ಭಾರತ, ಸಿಂಗಾಪುರ, ಇಟಲಿ, ಸಪೇನ್, ಹಾಂಕಾಂಗ್ ಮತ್ತು ಚೀನಾ ಸೇರಿದಂತೆ 31 ಹೈರಿಸ್ಕ್ ‌ದೇಶಗಳಿಗೆ ವಿಮಾನ ಸಂಚಾರವನ್ನು ನಿಷೇಧಿಸಿ ಕುವೈತ್ ಶನಿವಾರ ಆದೇಶ ಹೊರಡಿಸಿದೆ.

ಸಾಂಕ್ರಾಮಿಕದಿಂದಾಗಿ ಸಂಕಷ್ಟದಲ್ಲಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆ ತರಲು ಹಾಗೂ ವಿದೇಶಗಳಲ್ಲಿ ಕೆಲಸ ಮಾಡುವ ಭಾರತೀಯರಿಗೆ ಸಂಚಾರ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಟ್ರಾನ್ಸ್‌ಪೋರ್ಟ್ ಬಬಲ್ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಭಾರತೀಯ ವಿಮಾನಯಾನ ಇಲಾಖೆ ಅಧಿಕಾರಿಗಳು ಪ್ರಕಟಿಸಿದ ಬೆನ್ನಲ್ಲೇ ಕುವೈತ್ ‌ನ ಈ ಆದೇಶ ಹೊರಬಿದ್ದಿದೆ. ಕುವೈತ್‌ನ ಹೊಸ ಆದೇಶದಿಂದ ಈ ವಿಶೇಷ ಪ್ರಯಾಣ ಒಪ್ಪಂದಕ್ಕೆ ಧಕ್ಕೆಯಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆರೋಗ್ಯಾಧಿಕಾರಿಗಳ ಸೂಚನೆ ಮೇರಗೆ 31 ದೇಶಗಳಿಗೆ ವಾಣಿಜ್ಯ ವಿಮಾನಗಳ ಹಾರಾಟವನ್ನು ಕುವೈತ್ ನಿಷೇಧಿಸಿದೆ ಎಂದು ಡಿಜಿಸಿಎ ಪ್ರಕಟಿಸಿದೆ. ಶ್ರೀಲಂಕಾ, ನೇಪಾಳ, ಮೆಕ್ಸಿಕೊ, ಇಂಡೋನೇಷ್ಯಾ, ಚಿಲಿ, ಪಾಕಿಸ್ತಾನ, ಈಜಿಪ್ಟ್, ಇರಾನ್, ಬ್ರೆಝಿಲ್, ಕೊಲಂಬಿಯಾ, ಬಾಂಗ್ಲಾದೇಶ ಮತ್ತು ಫಿಲಿಫೀನ್ಸ್‌ನಂಥ ದೇಶಗಳೂ ನಿಷೇಧ ಪಟ್ಟಿಯಲ್ಲಿ ಸೇರಿವೆ.

ವಿವಿಧ ದೇಶಗಳಲ್ಲಿ ಪರಿಸ್ಥಿತಿ ಚಲನಶೀಲವಾಗಿದ್ದು, ಪ್ರಯಾಣ ನಿಯಮಾವಳಿಗಳು ಬದಲಾಗುತ್ತಿವೆ. ಸಾಂಕ್ರಾಮಿಕ ಸ್ಥಿತಿ ಸುಧಾರಿಸುವ ವರೆಗೆ ಅಥವಾ ಲಸಿಕೆ ಕಂಡುಹಿಡಿಯುವವರೆಗೆ ಈ ಅನಿಶ್ಚಿತತೆ ಮುಂದುವರಿಯಲಿದೆ ಎಂದು ಉನ್ನತ ಅಧಿಕಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News