​ಸುಶಾಂತ್ ತಂದೆ ಬಯಸಿದರೆ ಮಾತ್ರ ಸಿಬಿಐ ತನಿಖೆ : ಬಿಹಾರ ಸಿಎಂ

Update: 2020-08-02 04:47 GMT
ಸುಶಾಂತ್

ಪಾಟ್ನಾ: ಬಾಲಿವುಡ್‌ನ ಉದಯೋನ್ಮುಖ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್ ತಂದೆ ಬಯಸಿದರೆ ಮಾತ್ರ ಸಿಬಿಐ ತನಿಖೆ ಬಗ್ಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಸರ್ಕಾರಕ್ಕೆ ಕಾಂಗ್ರೆಸ್ ನೆರವಿನಲ್ಲಿ ಬಾಲಿವುಡ್ ಮಾಫಿಯಾದಿಂದ ಒತ್ತಡವಿದ್ದು, ಈ ಕಾರಣದಿಂದ ಪ್ರಕರಣಕ್ಕೆ ಸಂಬಂಧಿಸಿದವರನ್ನು ರಕ್ಷಿಸುವ ಪ್ರಯತ್ನ ನಡೆದಿದೆ ಎಂದು ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಹೇಳಿಕೆ ನೀಡಿದ ಬೆನ್ನಲ್ಲೇ, ಟಿವಿ ಸಂದರ್ಶನವೊಂದರಲ್ಲಿ ನಿತೀಶ್ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಮಹಾರಾಷ್ಟ್ರ ಪೊಲೀಸರು ಪ್ರಕರಣದ ತನಿಖೆ ಸಂಬಂಧ ಬಿಹಾರ ಪೊಲೀಸರ ಜತೆ ಸಹಕರಿಸಬೇಕು. ಪಾಟ್ನಾದಲ್ಲಿ ಎಫ್‌ಐಆರ್ ದಾಖಲಾಗಿರುವುದರಿಂದ ಅದು ಕಾನೂನಾತ್ಮಕ ಕರ್ತವ್ಯ ಹಾಗೂ ಬಿಹಾರ ಪೊಲೀಸರ ಹೊಣೆ ಎಂದು ಹೇಳಿದ್ದಾರೆ. ಉಭಯ ರಾಜ್ಯಗಳ ಪೊಲೀಸರ ನಡುವೆ ಯಾವುದೇ ಸಂಘರ್ಷ ಇಲ್ಲ ಎಂದು ಅವರು ವಿವರಿಸಿದರು.

ಆದರೆ ರಾಜ್ಯದ ಉಪಮುಖ್ಯಮಂತ್ರಿ ಮಾತ್ರ ಇದಕ್ಕೆ ತದ್ವಿರುದ್ಧ ಹೇಳಿಕೆ ನೀಡಿದ್ದಾರೆ. ಪ್ರಕರಣದ ಸಂಬಂಧ ಹಿಂದಿಭಾಷೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, ಬಿಹಾರ ಜನತೆಗೆ ಕಾಂಗ್ರೆಸ್ ಏನು ಪ್ರದರ್ಶಿಸುತ್ತದೆ ? ಎಂದು ಪ್ರಶ್ನಿಸಿದ್ದಾರೆ. ಶಿವಸೇನೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ, ಈ ಆತ್ಮಹತ್ಯೆ ಪ್ರಕರಣ ಸಂಬಂಧ ಬಿಹಾರ ಪೊಲೀಸರು ಭೇಟಿ ನೀಡುವುದನ್ನು ತಡೆಯುತ್ತಿದೆ ಎಂದು ಆಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News