ರಾತ್ರಿ 8ರಿಂದ ಬೆಳಗ್ಗೆ 4ರವರೆಗೆ ರಾಷ್ಟ್ರೀಯ ವಿಶ್ರಾಂತಿ ಸಮಯ ಘೋಷಣೆಗೆ ಪುತ್ತಿಗೆ ಸ್ವಾಮೀಜಿ ಆಗ್ರಹ

Update: 2020-08-02 12:23 GMT

ಉಡುಪಿ, ಆ.2: ಕೊರೋನ ವೈರಸ್ ಹಿನ್ನೆಲೆಯಲ್ಲಿ ಮನುಷ್ಯನ ಪ್ರತಿರೋಧ ಶಕ್ತಿ ಹೆಚ್ಚಿಸಲು ಪೂರಕವಾಗುವಂತೆ ರಾತ್ರಿ 8 ರಿಂದ ಬೆಳಗ್ಗೆ 4ರವರೆಗೆ ರಾಷ್ಟ್ರೀಯ ವಿಶ್ರಾಂತಿ ಸಮಯವೆಂದು ಘೋಷಿಸಿ, ಲಾಕ್‌ಡೌನ್‌ನಂತಹ ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕು ಎಂದು ಉಡುಪಿ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.

ಕೊರೋನ ಸೋಂಕಿನಿಂದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಗುಣಮುಖರಾಗಿ ಬಿಡುಗಡೆ ಹೊಂದಿರುವ ಸ್ವಾಮೀಜಿ, ಈ ಕುರಿತು ಹೇಳಿಕೆ ಯನ್ನು ಬಿಡುಗಡೆಗೊಳಿಸಿದ್ದಾರೆ.

ದೇಶದ ಆರೋಗ್ಯ ರಕ್ಷಣೆಗಾಗಿ ಈ ವಿಶ್ರಾಂತಿ ಸಮಯದಲ್ಲಿ ಯಾವುದೇ ಟಿವಿ ಪ್ರಸಾರ, ಮನೋರಂಜನಾ ಕಾರ್ಯಕ್ರಮಗಳನ್ನೆಲ್ಲಾ ನಿರ್ಬಂಧಿಸಬೇಕು. ವಿಶ್ರಾಂತಿ ಸಮಯಕ್ಕೆ ತೊಂದರೆಯಾಗುವ ರಾತ್ರಿ ಪ್ರಯಾಣಗಳನ್ನು ನಿಷೇಧಿಸಬೇಕು ಎಂದು ಅವರು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ.

ಒಂದು ಸಕಾಲ ನಿದ್ರಾ, ಸಕಾಲ ಆಹಾರ ಪದ್ಧತಿಯನ್ನು ಜನರು ತಪ್ಪದೇ ಪಾಲಿಸುವಂತೆ ಹಾಗೂ ಆಧುನಿಕ ಜೀವನ ಶೈಲಿಯನ್ನು ಬದಲಿಸು ವಂತೆ ಮಾಡಲು ಪೂರಕ ಶಾಸನಾತ್ಮಕ ಕ್ರಮಗಳನ್ನು ಜಾರಿಗೆ ತರಬೇಕು. ಅದ್ಭುತ ಪರಿಣಾಮ ನೀಡುವ ನಿದ್ರಾಹಾರಗಳ ಈ ಸಕಾಲತೆಗೆ ಸರಕಾರ ವಿಶೇಷ ಗಮನ ಹರಿಸಬೇಕು ಎಂದು ಅವರು ತಿಳಿಸಿದ್ದಾರೆ.

ಕೊರೋನ ಬಾಧಿಸಿದ ಸಂದರ್ಭ ಪ್ರತಿನಿತ್ಯ ಬೆಳಗ್ಗೆ 4 ಗಂಟೆಗೆ ಕೆಮ್ಮು ಆರಂಭವಾಗುತ್ತಿದ್ದು, ಈ ಬಗ್ಗೆ ತಜ್ಞರಲ್ಲಿ ವಿಚಾರಿಸಿದಾಗ ರಾತ್ರಿ ವಿಳಂಬವಾಗಿ ನಿದ್ರಿಸುವು ದರಿಂದ ಕೆಮ್ಮು ಬರುತ್ತಿದೆ ಎಂದು ತಿಳಿಸಿದ್ದರು. ಅದಕ್ಕೆ ಪ್ರಯತ್ನ ಪಟ್ಟು ರಾತ್ರಿ 9 ಗಂಟೆಯೊಳಗೆ ಮಲಗಿದೆ. ಆಗ ಕೆಮ್ಮು ಪ್ರಮಾಣ ಇಳಿಮುಖವಾಯಿತು. ಇದರಿಂದ ನಾನು ಮನುಷ್ಯನ ಪ್ರತಿರೋಧ ಶಕ್ತಿಗೂ, ನಿದ್ರಾ ಸಮಯಕ್ಕೂ ನೇರ ಸಂಬಂಧವಿರುವುದನ್ನು ಅರ್ಥ ಮಾಡಿಕೊಂಡೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೊರೋನದಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ರಾತ್ರಿ 8ರಿಂದ ಬೆಳಗ್ಗೆ 4 ಗಂಟೆವರೆಗೆ ಮಲಗುತ್ತಿದ್ದು, ಆಗ ದೇಹದಲ್ಲಿ ಪ್ರತಿರೋಧ ಶಕ್ತಿ ಜಾಗೃತವಾಗಿರುವುದನ್ನು ಅನುಭವಿಸಿದ್ದೇನೆ. ಕೊರೋನಗೆ ಲಸಿಕೆ, ಔಷಧ ಕಂಡು ಹಿಡಿದರೂ ಮನುಷ್ಯನಲ್ಲಿ ಪ್ರತಿರೋಧ ಶಕ್ತಿಯನ್ನು ಬಲಗೊಳಿಸುವ ನಿಯಮಗಳನ್ನು ಪರಿಪಾಲನೆ ಮಾಡದಿದ್ದರೆ ಕೊರೋನ ನಿರ್ಮೂಲನೆ ಆಗುವುದಿಲ್ಲ. ಕೊರೋನದಂತಹ ಇನ್ನಷ್ಟು ಸಮಸ್ಯೆಗಳು ಸೃಷ್ಟಿಯಾಗಬಹುದು ಎಂದು ಅವರು ಹೇಳಿದ್ದಾರೆ.

ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟು ಸರಕಾರ, ಸಮಗ್ರ ಆರೋಗ್ಯ ವ್ಯವಸ್ಥೆಯನ್ನು ಪುನರ್ ನವೀಕರಿಸುವಂತಹ ಯೋಗ, ಪ್ರಾಣಾಯಾಮ, ಆಯುರ್ವೇದಗಳಿಗೆ ಹಾಗೂ ಸಕಾಲತೆಗೆ ವಿಶೇಷ ಮಹತ್ವ ಕೊಡಬೇಕು. ಈ ನಿಟ್ಟಿನಲ್ಲಿ ಪ್ರತಿರೋಧ ಶಕ್ತಿಯ ಪುನರುತ್ಥಾನಕ್ಕೆ ಪ್ರಮುಖ ಕಾರಣಗಳಾದ ಸಕಾಲ ಆಹಾರ ಹಾಗೂ ಸಕಾಲ ನಿದ್ರೆ ಸೂರ್ಯಾಸ್ತಕ್ಕಿಂತ ಮೊದಲು ಆಹಾರ ಸೇವನೆಯ ಮುಕ್ತಾಯ ಹಾಗೂ ರಾತ್ರಿ 8 ರಿಂದ ಬೆಳಗ್ಗೆ 4ರ ತನಕ ರಾಷ್ಟ್ರೀಯ ವಿಶ್ರಾಂತಿ ಸಮಯವೆಂದು ಘೋಷಿಸಬೇಕು ಎಂದು ಪುತ್ತಿಗೆ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News