ಕೋವಿಡ್ ಸಂಕಷ್ಟದ ನಡುವೆ ಮಾನವೀಯತೆ : ಅಂತ್ಯ ಸಂಸ್ಕಾರಕ್ಕೆ ಕುಟುಂಬಸ್ಥರ ಜತೆ ಭಾಗಿಯಾದ ಸಹಾಯವಾಣಿ ತಂಡ

Update: 2020-08-02 13:43 GMT

ಮಂಗಳೂರು, ಆ.2: ಕೋವಿಡ್ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಮುಂದಾಗುವವರ ಸಂಖ್ಯೆ ವಿರಳವಾಗಿರುವ ನಡುವೆಯೇ, ಅಂತಿಮ ಯಾತ್ರೆಯಲ್ಲಿ ಕುಟುಂಬದವರಂತೆ ಗೌರವ ನೀಡುವ ಸಹೃದಯಿಗಳು ನಮ್ಮ ನಡುವಿದ್ದಾರೆ. ಇಂತಹ ಮಾನವೀಯತೆಯ ಹಲವು ವಿಧಗಳು ನಮ್ಮೆದುರು ಘಟಿಸುತ್ತಿರುವುದಕ್ಕೆ ಇದೂ ಒಂದು ಉದಾಹರಣೆ.

ಮಂಗಳೂರು ಮಹಾನಗರ ಪಾಲಿಕೆಯ 43ನೆ ಕುದ್ರೋಳಿ ವಾರ್ಡ್‌ವ ಬರ್ಕೆಯ ಮಹಿಳೆಯೊಬ್ಬರು ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಅವರಿಗೆ ಕೋವಿಡ್ ಸೋಂಕು ತಗಲಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆ. 1ರಂದು ಮೃತಪಟ್ಟಿದ್ದರು. ಆ ಸಂದರ್ಭ ವಾರ್ಡ್‌ನ ಕಾರ್ಪೊರೇಟರ್ ಸಂಶುದ್ದೀನ್ ನೇತೃತ್ವದಲ್ಲಿ ಕೋವಿಡ್ ಸಹಾಯವಾಣಿ ತಂಡದ ಸದಸ್ಯರು ಆಸ್ಪತ್ರೆಗೆ ತೆರಳಿ ಮೃತ ಶರೀರವನ್ನು ಬೋಳೂರು ಹಿಂದೂ ರುದ್ರಭೂಮಿಗೆ ಸಾಗಿಸುವಲ್ಲಿ ಸಹಕರಿಸಿದರು. ಮಾತ್ರವಲ್ಲದೆ ಅಲ್ಲಿ ಸೇರಿದ್ದ ಕುಟುಂಬದವರ ಜತೆ ಮೃತ ಮಹಿಳೆಯ ಅಂತ್ಯ ಸಂಸ್ಕಾರಕ್ಕೆ ಕೈಜೋಡಿಸಿದ್ದಾರೆ. ಕುಟಂಬದವರಿಗೆ ಅವರ ಕೋರಿಕೆಯಂತೆ ಮನೆಯ ಹಿರಿಯ ಸದಸ್ಯೆಯ ಅಂತಿಮ ಯಾತ್ರೆಯ ವೇಳೆ ಮುಖದರ್ಶನಕ್ಕೆ ಅವಕಾಶ ನೀಡಿ ಗೌರವಯುತ ಅಂತ್ಯ ಸಂಸ್ಕಾರಕ್ಕೆ ಕಾರಣರಾಗಿದ್ದಾರೆ.

‘‘ನಿನ್ನೆ ನನ್ನ ವಾರ್ಡ್‌ನ ಹಿರಿಯ ಮಹಿಳೆ ಮೃತರಾದಾಗ ಅವರ ಕುಟುಂಬದ ಸದಸ್ಯರೊಬ್ಬರು ಮೃತರ ಮುಖವನ್ನು ನೋಡಬೇಕೆಂದು ನನಗೆ ಕರೆ ಮಾಡಿ ಕೋರಿಕೊಂಡರು. ಆದರೆ ಆಸ್ಪತ್ರೆಗೆ ತೆರಳಿ ನೋಡಲು ಅವಕಾಶವಿಲ್ಲದ ಕಾರಣ ರುದ್ರಭೂಮಿಯ ಬಳಿ ಬರುವಂತೆ ತಿಳಿಸಿ, ಅಲ್ಲಿ ಮನೆಯವರಿಗೆ ಮೃತರ ಮುಖದ ಅಂತಿಮ ದರ್ಶನಕ್ಕೆ ಅವಕಾಶ ನೀಡಿ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಯಿತು. ಕುಟುಂಬದ ಕೆಲ ಸದಸ್ಯರ ಉಪಸ್ಥಿತಿಯಲ್ಲಿ ಮೃತರ ಗೌರವಯುತ ಅಂತಿಮ ಸಂಸ್ಕಾರಕ್ಕೆ ನನ್ನ ಜತೆ ನಮ್ಮ ಸಹಾಯವಾಣಿ ತಂಡದ ಸದಸ್ಯರಿದ್ದು ಸಹಕರಿಸಿದರು.’’

- ಸಂಶುದ್ದೀನ್, ಕಾರ್ಪೊರೇಟರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News