ಭಾರತದಲ್ಲಿ ಪ್ರಥಮ ಬಾರಿಗೆ ಟ್ರಾಫಿಕ್ ದೀಪಗಳಲ್ಲಿ ಮಹಿಳಾ ಪಾದಚಾರಿಗಳ ಚಿತ್ರ ಬಳಕೆ

Update: 2020-08-02 14:37 GMT

ಮುಂಬೈ, ಆ.2: ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಟ್ರಾಫಿಕ್ ದೀಪಗಳಲ್ಲಿ ಮತ್ತು ಸೂಚನಾ ಫಲಕಗಳಲ್ಲಿ ಮಹಿಳೆಯರನ್ನು ಪ್ರತಿನಿಧಿಸುವ ಚಿತ್ರಗಳನ್ನು ಬಳಸಲಾಗುವುದು. ಬೃಹನ್ಮುಂಬಯಿ ಮುನಿಸಿಪಲ್ ಕಾರ್ಪೊರೇಶನ್‌ನ ‘ಕಲ್ಚರ್ ಸ್ಪೈನ್’ ಯೋಜನೆಯಡಿ ದಾದರ್ ಮತ್ತು ಮಾಹಿಮ್ ನಡುವಿನ 120 ಟ್ರಾಫಿಕ್ ಸಿಗ್ನಲ್‌ಗಳ ದೀಪದಲ್ಲಿ ಈ ಬದಲಾವಣೆಯಾಗಲಿದೆ.

ಶಿವಸೇನೆಯ ಮುಖಂಡ, ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆಯ ನೆಚ್ಚಿನ ಯೋಜನೆಯಾಗಿರುವ ‘ಕಲ್ಚರ್ ಸ್ಪೈನ್’ನಡಿ ಸಿದ್ಧಿವಿನಾಯಕ ದೇವಸ್ಥಾನದಿಂದ ಮಾಹಿಮ್‌ವರೆಗಿನ ಫುಟ್‌ಪಾತ್‌ಗಳನ್ನು ಅಭಿವೃದ್ಧಿ(ಸುಧಾರಣೆ)ಗೊಳಿಸುವುದು ಹಾಗೂ ಉದ್ಯಾನವನಗಳ ಸಂರಕ್ಷಣೆ ಕಾರ್ಯ ನಡೆಯಲಿದೆ. ಮಹಿಳಾ ಪಾದಚಾರಿಗಳನ್ನು ಒಳಗೊಂಡಿರುವ ಹೊಸ ಟ್ರಾಫಿಕ್ ದೀಪಗಳ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಠಾಕ್ರೆ, ದಾದರ್ ಮೂಲಕ ನೀವು ಪ್ರಯಾಣಿಸುವುದಾದರೆ ಆಗ ನಿಮಗೆ ಕಾಣುವ ದೃಶ್ಯದ ಬಗ್ಗೆ ಹೆಮ್ಮೆಪಟ್ಟುಕೊಳ್ಳುತ್ತೀರಿ. ಬಿಎಂಸಿಯು ಈಗ ಸರಳ ಕಲ್ಪನೆಯ ಮೂಲಕ ಲಿಂಗ ಸಮಾನತೆಯ ಸಂದೇಶ ಸಾರಿದೆ ಎಂದು ಚಿತ್ರಕ್ಕೆ ಅಡಿಬರಹ ನೀಡಿದ್ದಾರೆ. ಶನಿವಾರ ದಾದರ್‌ನ ಟ್ರಾಫಿಕ್ ಸಿಗ್ನಲ್‌ನಲ್ಲಿ ಇಂತಹ ಪ್ರಥಮ ಸಂಕೇತ ಅಳವಡಿಸಲಾಗಿದೆ. ಜರ್ಮನಿ ಸೇರಿದಂತೆ ಹಲವು ಯುರೋಪಿಯನ್ ದೇಶಗಳಲ್ಲಿ ಈಗಾಗಲೇ ಈ ಬದಲಾವಣೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News