ಮೆಹಬೂಬಾ ಮುಫ್ತಿ ಬಿಡುಗಡೆಗೆ ರಾಹುಲ್ ಗಾಂಧಿ ಆಗ್ರಹ

Update: 2020-08-02 14:59 GMT
Photo: Videograb/Twitter

ಹೊಸದಿಲ್ಲಿ, ಆ. 2: ಜಮ್ಮು ಹಾಗೂ ಕಾಶ್ಮೀರದಲ್ಲಿ ಸುರಕ್ಷಾ ಕಾಯ್ದೆ ಅಡಿ ಬಂಧಿತರಾಗಿರುವ ಪಿಡಿಪಿ ವರಿಷ್ಠೆ ಹಾಗೂ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರನ್ನು ಬಿಡುಗಡೆ ಮಾಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರವಿವಾರ ಆಗ್ರಹಿಸಿದ್ದಾರೆ.

ರಾಜಕೀಯ ನಾಯಕರನ್ನು ಕಾನೂನು ಬಾಹಿರವಾಗಿ ಗೃಹ ಬಂಧನದಲ್ಲಿ ಇರಿಸುವ ಮೂಲಕ ಕೇಂದ್ರ ಸರಕಾರ ಪ್ರಜಾಪ್ರಭುತ್ವಕ್ಕೆ ಹಾನಿ ಉಂಟು ಮಾಡುತ್ತಿದೆ ಅವರು ಆರೋಪಿಸಿದ್ದಾರೆ.

ಪಿಡಿಪಿ ವರಿಷ್ಠೆ ಹಾಗೂ ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರನ್ನು ಕಠಿಣ ಸಾರ್ವಜನಿಕ ಸುರಕ್ಷಾ ಅಡಿಯ ಬಂಧನವನ್ನು ಜಮ್ಮು ಹಾಗೂ ಕಾಶ್ಮೀರ ಆಡಳಿತ ವಿಸ್ತರಿಸಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಮ್ಮು ಹಾಗೂ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಬಳಿಕ ಹಲವು ನಾಯಕರನ್ನು ಬಂಧನಕ್ಕೆ ಒಳಪಡಿಸಲಾಗಿತ್ತು. ಅವರೆಲ್ಲರೂ ಕಳೆದ ಒಂದು ವರ್ಷಗಳಿಂದ ಬಂಧನದಲ್ಲಿ ಇದ್ದಾರೆ. ಅವರಲ್ಲಿ ಮೆಹಬೂಬಾ ಮುಫ್ತಿ ಕೂಡ ಸೇರಿದ್ದಾರೆ. ಶುಕ್ರವಾರ ಮೆಹಬೂಬಾ ಮುಫ್ತಿ ಅವರ ಬಂಧನವನ್ನು ಮೂರು ತಿಂಗಳುಗಳ ಕಾಲ ವಿಸ್ತರಿಸಲಾಗಿದೆ.

‘‘ರಾಜಕೀಯ ನಾಯಕರನ್ನು ಕಾನೂನು ಬಾಹಿರವಾಗಿ ಬಂಧನದಲ್ಲಿ ಇರಿಸುವ ಮೂಲಕ ಕೇಂದ್ರ ಸರಕಾರ ಭಾರತದ ಪ್ರಜಾಪ್ರಭುತ್ವಕ್ಕೆ ಹಾನಿ ಉಂಟು ಮಾಡುತ್ತಿದೆ. ಮೆಹಬೂಬಾ ಮುಫ್ತಿ ಅವರ ಬಿಡುಗಡೆಗೆ ಇದು ಸಕಾಲ’’ ಎಂದು ಅವರು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಶೇಕ್ ಅಬ್ದುಲ್ಲಾ ಅವರನ್ನು ಬಂಧನದಲ್ಲಿ ಇರಿಸಿರುವುದನ್ನು ಕಾಂಗ್ರೆಸ್ ನೆನಪಿಸಿಕೊಳ್ಳಬೇಕು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News