ಸಿಂಗಾಪುರ: ಹಿಂದೂ ದೇಗುಲದ ಮುಖ್ಯ ಅರ್ಚಕನ ಬಂಧನ

Update: 2020-08-02 17:50 GMT

ಸಿಂಗಾಪುರ,ಆ.2: ಸಿಂಗಾಪುರದ ಪುರಾತನ ಶ್ರೀ ಮಾರಿಯಮ್ಮ ಹಿಂದೂ ದೇವಾಲಯದ ಆಭರಣಗಳ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ದೇಗುಲದ ಅರ್ಚಕನನ್ನು ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ವಿಶ್ವಾಸದ್ರೋಹದ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ದೇವಾಲಯದ ಕೆಲವು ಚಿನ್ನಾಭರಣಗಳನ್ನು ನಿತ್ಯಪೂಜೆಗಾಗಿ ಈ ಆರ್ಚಕನ ಸುಪರ್ದಿಗೆ ನೀಡಲಾಗಿತ್ತು. ದೇವಾಲಯದ ಲೆಕ್ಕಪತ್ರಗಳ ಪರಿಶೋಧನೆಯ ಸಂದರ್ಭದಲ್ಲಿ ಕೆಲವು ಚಿನ್ನಾಭರಣಗಳು ನಾಪತ್ತೆಯಾಗಿರುವುದು ಪತ್ತೆಯಾಗಿದೆ. ಆದಾಗ್ಯೂ ಆರೋಪಿ ಮುಖ್ಯ ಅರ್ಚಕನ ಹೆಸರನ್ನು ಆಡಳಿತ ಮಂಡಳಿ ಬಹಿರಂಗಪಡಿಸಿಲ್ಲ.

 ಅರ್ಚಕನನ್ನು ವಿಚಾರಣೆಗೊಳಪಡಿಸಿದ ಬಳಿಕ ಆತ ಚಿನ್ನಾಭರಣಗಳನ್ನು ಹಿಂತಿರುಗಿಸಿರುವುದಾಗಿ ಆಡಳಿತ ಮಂಡಳಿ ಹೇಳಿದೆ. ಆತನನ್ನು ಹೊರತುಪಡಿಸಿ ಬೇರೆ ಯಾವುದೇ ವ್ಯಕ್ತಿಯು ಈ ಪ್ರಕರಣದಲ್ಲಿ ಶಾಮೀಲಾಗಿಲ್ಲವೆಂದು ಅದು ಹೇಳಿದ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, 36 ವರ್ಷ ವಯಸ್ಸಿನ ಮುಖ್ಯ ಅರ್ಚಕನ ವಿರುದ್ಧ ಕ್ರಿಮಿನಲ್ ವಿಶ್ವಾಸದ ದ್ರೋಹದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತನಿಗೆ ಈಗ ಜಾಮೀನು ದೊರೆತಿರುವುದಾಗಿ ದೇಗುಲದ ಆಡಳಿತ ಮಂಡಳಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News