ಮನೆ ಎದುರು ವಿದ್ಯುತ್ ಗೋಪುರಕ್ಕೆ ಗುಂಡಿ ತೋಡಿದ ಕೆಪಿಟಿಸಿಎಲ್: ಆರೋಪ

Update: 2020-08-02 18:01 GMT

ಮಂಗಳೂರು, ಆ.2: ನಗರದ ಹೊರವಲಯ ಜೋಕಟ್ಟೆಗೆ ತಾಗಿಕೊಂಡಂತಿರುವ ಕಾಪಿಗುಡ್ಡೆಯ ಮನೆಯೊಂದರ ಎದುರು ವಿದ್ಯುತ್ ಗೋಪುರ ನಿರ್ಮಿಸಲು ಗುಂಡಿ ತೋಡಿರುವುದು ಕುಟುಂಬವನ್ನು ಕಂಗಾಲಾಗೀಡು ಮಾಡಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್) ಎಡವಟ್ಟಿನಿಂದಾಗಿಯೇ ಈ ಸಮಸ್ಯೆ ತಲೆದೋರಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

ಮರವೂರು ಗ್ರಾಪಂ ವ್ಯಾಪ್ತಿಗೆ ಒಳಪಟ್ಟ ಕಾಪಿಗುಡ್ಡೆಯಲ್ಲಿನ ಅಲೀಮಾ ಎಂಬವರ ಕುಟುಂಬವೇ ಈ ಸಂಕಷ್ಟವನ್ನು ಎದುರಿಸುತ್ತಿದೆ. ಅಲೀಮಾ ಅವರದ್ದು ತೀರಾ ಬಡ ಕುಟುಂಬ. ತಲೆತಲಾಂತರದಿಂದ ಇಲ್ಲಿಯೇ ನೆಲೆಯೂರಿದೆ. ಮನೆಯ ಹಕ್ಕುಪತ್ರ ಸಹಿತ ಎಲ್ಲ ದಾಖಲೆಗಳನ್ನು ಕುಟುಂಬ ಹೊಂದಿದೆ. ಸಮರ್ಪಕ ಮೂಲಭೂತ ಸೌಲಭ್ಯಗಳಿಲ್ಲದ ಹೊರತಾಗಿಯೂ ಬದುಕು ಸಾಗಿಸುತ್ತಿದೆ ಈ ಕುಟುಂಬ. ಮನೆಯಿಂದ ಕಣ್ಣಳತೆಯಷ್ಟು ಹತ್ತಿರದಲ್ಲಿ ವಿಸ್ತರಣೆಗೊಂಡ ಎಂಆರ್‌ಪಿಎಲ್ ಘಟಕದ ಮಾಲಿನ್ಯದಿಂದ ದಿನವೂ ಸ್ಥಳೀಯರನ್ನು ಉಸಿರುಗಟ್ಟುವಂತೆ ಮಾಡುತ್ತಿದೆ ಎನ್ನುವ ಆರೋಪವಿದೆ.

‘ಮನೆಯ ಮುಂಭಾಗದಲ್ಲೆ ಏಳೆಂಟು ವರ್ಷದ ಹಿಂದೆ ಕೆಪಿಟಿಸಿಎಲ್‌ನಿಂದ ಎಸ್‌ಇಝೆಡ್, ಎಂಆರ್‌ಪಿಎಲ್ ಘಟಕಗಳಿಗೆ ವಿದ್ಯುತ್ ಸಾಗಿಸುವ ಬೃಹತ್ ಸರಬರಾಜು ಗೋಪುರ ನಿರ್ಮಿಸಲಾಗಿದೆ. ಇಲ್ಲಿನ ಬಡ ಕುಟುಂಬಗಳ ಮನೆಗಳ ಮೇಲೆಯೇ ಹೈ ವೊಲ್ಟೇಜ್ ವಿದ್ಯುತ್ ತಂತಿಗಳು ಹಾದು ಹೋಗಿವೆ. ಮನೆಯ ಗೇಟಿಗೆ ತಾಗಿಕೊಂಡು ಆಕಾಶದೆತ್ತರದ ಬೃಹತ್ ವಿದ್ಯುತ್ ಗೋಪುರ ತಲೆ ಎತ್ತಿದರೂ ತಮ್ಮ ಕುಟುಂಬವು ಯಾವುದೇ ಸಂಸ್ಥೆ, ನಿಗಮಗಳ ಎದುರು ಪ್ರತಿರೋಧ ತೋರಿಸಿಲ್ಲ. ಆದಾಗ್ಯೂ, ಮತ್ತೆ ಸಂಕಷ್ಟ ನೀಡಲು ಕೆಪಿಟಿಸಿಎಲ್ ಮುಂದಾಗಿದೆ’ ಎನ್ನುತ್ತಾರೆ ಸಂತ್ರಸ್ತೆ ಅಲೀಮಾ ಅವರ ಪುತ್ರ ಫೈಝಲ್.

‘ವರ್ಷದ ಹಿಂದೆ ಎಂಆರ್‌ಪಿಎಲ್, ಎಸ್‌ಇಝೆಡ್‌ಗಳಿಗೆ ಅಧಿಕ ವಿದ್ಯುತ್ ಪೂರೈಕೆ ಮಾಡಲು ಉದ್ದೇಶಿಸಿ ಗೋಪುರದ ಸಾಮರ್ಥ್ಯವನ್ನು (110 ಕೆ.ವಿ.) ಹೆಚ್ಚಿಸಲು ಕೆಪಿಟಿಸಿಎಲ್ ನಿರ್ಧರಿಸಿತು. ಈ ಸಂದರ್ಭ ಸ್ಥಳೀಯರೊಂದಿಗೆ ಯಾವುದೇ ಮಾತುಕತೆ ನಡೆಸದೇ ಈ ಹಿಂದಿನ ದೈತ್ಯ ಗೋಪುರವನ್ನು ತೆರವುಗೊಳಿಸಿ ಅದರ ಎರಡರಷ್ಟು ಗಾತ್ರದ ಬೃಹತ್ ಗೋಪುರ ನಿರ್ಮಿಸಲು ಮುಂದಾಗಿತ್ತು. ನಮ್ಮ ಮನೆಯ ಸಣ್ಣ ದಾರಿಯಲ್ಲೇ ಗೋಪುರದ ಪಿಲ್ಲರ್‌ಗಾಗಿ ಆಳವಾದ ಗುಂಡಿ ತೋಡತೊಡಗಿತ್ತು. ಈ ವೇಳೆ ಆಕ್ಷೇಪ ವ್ಯಕ್ತಪಡಿಸಿದಾಗ ಗುತ್ತಿಗೆದಾರರೇ ಧಮ್ಕಿ ಹಾಕಿದ್ದರು’ ಎಂದು ಫೈಝಲ್ ಆರೋಪಿಸಿದರು.

‘ಸಂತ್ರಸ್ತ ಕುಟುಂಬದ ಮನೆಗೆ ತೆರಳಿದ ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ಹಾಗೂ ಡಿವೈಎಫ್‌ಐ ನಿಯೋಗವು ಸ್ಥಳ ಪರಿಶೀಲಿಸಿತು. ಕೆಪಿಟಿಸಿಎಲ್ ಅಧಿಕಾರಿಗಳು ನಿಯಮ ಉಲ್ಲಂಘಿಸಿ ಬಡ ಕುಟುಂಬದ ಮೇಲೆ ದೌರ್ಜನ್ಯ ಎಸಗುವುದನ್ನು ಸಹಿಸದೆ, ಗೋಪುರದ ಕೆಲಸಕ್ಕೆ ತಡೆ ಒಡ್ಡಿದ್ದೆವು. ಮನೆಯ ದಾರಿ ಮುಚ್ಚುವುದು ಮೂಲಭೂತ ಹಕ್ಕಿನ ಉಲ್ಲಂಘನೆ, ನಿಯಮ ಪಾಲಿಸಿ, ಬಳಿಕ ಗೋಪುರ ನಿರ್ಮಿಸಬೇಕು. ಅಲ್ಲಿಯವರಗೆ ಗೋಪುರ ನಿರ್ಮಿಸಲು ಅವಕಾಶ ನೀಡಲಾರೆವು ಎಂದು ಪಟ್ಟು ಹಿಡಿದಿದ್ದೆವು’ ಎನ್ನುತ್ತಾರೆ ಡಿವೈಎಫ್‌ಐ ರಾಜ್ಯಾಧ್ಯಕ್ಷ ಹಾಗೂ ಜೋಕಟ್ಟೆ ನಾಗರಿಕ ಹೋರಾಟ ಸಮಿತಿಯ ಮುಖಂಡರೂ ಆಗಿರುವ ಮುನೀರ್ ಕಾಟಿಪಳ್ಳ.

‘ಸಮಿತಿಯ ಹೋರಾಟದ ನಂತರ ಮನೆಯ ಮುಂದಿನ ರಸ್ತೆಯ ಗುಂಡಿ ಮುಚ್ಚದೇ ಗೋಪುರ ನಿರ್ಮಾಣ ಕಾರ್ಯವನ್ನು ನಿಗಮ ಮುಂದೂಡಿತ್ತು. ಅಲೀಮಾರ ಬಡ ಕುಟುಂಬವು ಈ ಸಮಸ್ಯೆ ಬಗ್ಗೆ ಬಾಳ ಗ್ರಾಪಂಗೆ ಲಿಖಿತ ದೂರನ್ನೂ ಕುಟುಂಬ ಸಲ್ಲಿಸಿತ್ತು. ವರ್ಷ ಕಾಲ ಸುಮ್ಮನಿದ್ದ ಅಧಿಕಾರಿಗಳು ಮತ್ತೆ ಗೋಪುರ ನಿರ್ಮಿಸಲು ಮುಂದಾಗಿದ್ದಾರೆ. ಜೊತೆಗೆ, ಗ್ರಾಪಂ ಕೂಡ ಮನವೊಲಿಕೆಯ ಹೆಸರಿನಲ್ಲಿ ಅಲೀಮಾ ಕುಟುಂಬಕ್ಕೆ ಬೆದರಿಕೆ ಒಡ್ಡಿದೆ’ ಎನ್ನುತ್ತಾರೆ ಮುನೀರ್.

ಮನೆಯ ಮೇಲೆಯೇ ಹೈ ವೊಲ್ಟೇಜ್ ವಿದ್ಯುತ್ ತಂತಿಗಳು ಹಾದು ಹೋಗಿದ್ದು, ಮನೆ ಎದುರು ವಿದ್ಯುತ್ ಸರಬರಾಜು ಗೋಪುರವಿದೆ. ಇದರ ವಿಸ್ತರಣೆಗಾಗಿ ದೊಡ್ಡದಾದ ಗುಂಡಿ ತೆರೆಯಲಾಗಿದೆ. ಇದರಿಂದ ನಮಗೆ ಬಹಳಷ್ಟು ತೊಂದರೆಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ನಮಗೆ ಓಡಾಡಲು ಸುಸಜ್ಜಿತ ರಸ್ತೆ ನಿರ್ಮಿಸಿಕೊಡಬೇಕು.

- ಫೈಝಲ್, ಸಂತ್ರಸ್ತೆ ಅಲೀಮಾ ಅವರ ಪುತ್ರ

ಬೈಕಂಪಾಡಿ, ಕಾವೂರು ಸುತ್ತಮುತ್ತ ಪ್ರದೇಶ ಸಹಿತ ಜಿಲ್ಲೆಯ ವಿವಿಧೆಡೆ ಅಧಿಕ ವಿದ್ಯುತ್ ಪೂರೈಕೆ ಮಾಡಲು ಗೋಪುರದ ಸಾಮರ್ಥ್ಯ ವಿಸ್ತರಿಸುವ ಕಾರ್ಯ ಪ್ರಗತಿಯಲ್ಲಿದೆ. ಇದು ಸರಕಾರದ ದೊಡ್ಡ ಮೊತ್ತದ ಯೋಜನೆ. ಇದರಿಂದ ಲಕ್ಷಾಂತರ ಮಂದಿಗೆ ಪ್ರಯೋಜನವಿದೆ. ಹಾಗಂತ ನಿಗಮದಿಂದ ಯಾರ ಸಮಸ್ಯೆಯನ್ನೂ ಕಡೆಗಣಿಸುತ್ತಿಲ್ಲ. ಕಾಪಿಗುಡ್ಡೆಯ ಆ ಕುಟುಂಬದ ಸಮಸ್ಯೆಯನ್ನು ಪರಿಹರಿಸಲು ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ.

- ರವಿಕಾಂತ್ ಕಾಮತ್, ಸೂಪರಿಂಟೆಂಡೆಂಡ್ ಎಕ್ಸಿಕ್ಯೂಟಿವ್ ಇಂಜಿನಿಯರ್, ಕೆಪಿಟಿಸಿಎಲ್ ಮಂಗಳೂರು

ಎಂಆರ್‌ಪಿಎಲ್, ಎಸ್‌ಇಝೆಡ್‌ನಂತಹ ಬೃಹತ್ ಕಂಪೆನಿಗಳ ಅನುಕೂಲಕ್ಕಾಗಿ ಕೆಪಿಟಿಸಿಎಲ್ ನಿಯಮ ಬಾಹಿರವಾಗಿ ಬಡ ಕುಟುಂಬವೊಂದರ ರಸ್ತೆಯನ್ನೇ ಮುಚ್ಚುವುದು, ದಿಗ್ಬಂಧನಕ್ಕೆ ಒಳಪಡಿಸುವುದು ಅಕ್ಷಮ್ಯ. ಜಿಲ್ಲಾಡಳಿತ ಅಲೀಮಾ ಕುಟುಂಬಕ್ಕೆ ನ್ಯಾಯ ಒದಗಿಸಬೇಕು.

ಮುನೀರ್ ಕಾಟಿಪಳ್ಳ, ಜೋಕಟ್ಟೆ ನಾಗರಿಕ ಹೋರಾಟ ಸಮಿತಿಯ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News