ನವೆಂಬರ್ 3ರಂದು ನಿಗದಿಯಂತೆ ಚುನಾವಣೆ: ಶ್ವೇತಭವನ

Update: 2020-08-03 17:59 GMT

ವಾಶಿಂಗ್ಟನ್, ಆ. 3: 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯನ್ನು ಮುಂದೂಡುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಪ್ರಸ್ತಾವವನ್ನು ಶ್ವೇತಭವನ ಮತ್ತು ಟ್ರಂಪ್‌ರ ಪ್ರಚಾರ ತಂಡ ರವಿವಾರ ತಳ್ಳಿಹಾಕಿದೆ. ನವೆಂಬರ್ 3ರಂದು ಅಮೆರಿಕದಲ್ಲಿ ಚುನಾವಣೆ ನಡೆಯುತ್ತದೆ ಎಂದು ಅವು ಹೇಳಿವೆ.

ಅಮೆರಿಕದ ಚುನಾವಣೆಯನ್ನು ಮುಂದೂಡುವ ಪ್ರಸ್ತಾವವನ್ನು ಮುಂದಿಡುವ ಮೂಲಕ ಅವರು ಅಂಚೆ ಮತಗಳ ಬಗ್ಗೆ ಕಳವವಳವನ್ನಷ್ಟೇ ವ್ಯಕ್ತಪಡಿಸಿದ್ದಾರೆ ಎಂದು ಶ್ವೇತಭವನದ ಸಿಬ್ಬಂದಿ ಮುಖ್ಯಸ್ಥ ಮಾರ್ಕ್ ಮೀಡೋಸ್ ಹೇಳಿದ್ದಾರೆ.

‘‘ಅಮೆರಿಕದಲ್ಲಿ ನವೆಂಬರ್ 3ರಂದೇ ಚುನಾವಣೆ ನಡೆಯುತ್ತದೆ ಹಾಗೂ ಅಧ್ಯಕ್ಷರು ಜಯಶಾಲಿಯಾಗುತ್ತಾರೆ’’ ಎಂದು ಸಿಬಿಎಸ್‌ನ ‘ಫೇಸ್ ದ ನೇಶನ್’ ಕಾರ್ಯಕ್ರಮದಲ್ಲಿ ಮೀಡೋಸ್ ಹೇಳಿದರು.

ಇದೇ ಅಭಿಪ್ರಾಯವನ್ನು ಅಧ್ಯಕ್ಷರ ಪ್ರಚಾರ ಸಲಹೆಗಾರ ಜಾಸನ್ ಮಿಲ್ಲರ್ ‘ಫಾಕ್ಸ್ ನ್ಯೂಸ್ ಸಂಡೇ’ ಕಾರ್ಯಕ್ರಮದಲ್ಲಿ ಹೇಳಿದರು.

ಅಮೆರಿಕದ ಚುನಾವಣೆಯನ್ನು ಮುಂದೂಡುವ ಸಲಹೆಯನ್ನು ಟ್ರಂಪ್ ಗುರುವಾರ ಮುಂದಿಟ್ಟಿದ್ದರು. ಆದರೆ, ಆ ಪ್ರಸ್ತಾವವನ್ನು ಸಂಸತ್ತಿನಲ್ಲಿರುವ ಡೆಮಾಕ್ರಟಿಕರು ಮತ್ತು ಟ್ರಂಪ್‌ರದೇ ರಿಪಬ್ಲಿಕನ್ ಸಂಸದರು ತಿರಸ್ಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News