ಭಾರತದಲ್ಲಿ ರವಿವಾರ ಕೊರೋನ ಪ್ರಕರಣಗಳ ಸಂಖ್ಯೆ ವಿಶ್ವದಲ್ಲೇ ಗರಿಷ್ಠ!

Update: 2020-08-04 04:20 GMT

ಹೊಸದಿಲ್ಲಿ, ಆ.4: ಇದೇ ಮೊದಲ ಬಾರಿಗೆ ವಿಶ್ವದಲ್ಲೇ ಗರಿಷ್ಠ ಸಂಖ್ಯೆಯ ಕೊರೋನ ಪ್ರಕರಣಗಳು ಭಾರತದಲ್ಲಿ ರವಿವಾರ ವರದಿಯಾಗಿವೆ. ಭಾರತದಲ್ಲಿ ರವಿವಾರ 53,641 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇದು ಅತಿಹೆಚ್ಚು ಪ್ರಕರಣ ದಾಖಲಾಗಿರುವ ಅಮೆರಿಕ (49,038) ಹಾಗೂ ಬ್ರೆಝಿಲ್ (24,801)ಗಿಂತ ಅಧಿಕ ಎಂದು ವರ್ಲ್ಡ್‌ಮೀಟರ್ಸ್‌.ಇನ್ಫೋ ಹೇಳಿದೆ.

ಅಂತೆಯೇ ಕಳೆದ ಒಂದು ವಾರದಲ್ಲಿ ಬ್ರೆಝಿಲ್ ದೇಶವನ್ನು ಹಿಂದಿಕ್ಕಿ ಭಾರತ ವಿಶ್ವದಲ್ಲೇ ಎರಡನೇ ಗರಿಷ್ಠ ಸಂಖ್ಯೆಯ ಪ್ರಕರಣಗಳನ್ನು ದಾಖಲಿಸಿವೆ. ಅಮೆರಿಕದಲ್ಲಿ ಮಾತ್ರ ಭಾರತಕ್ಕಿಂತ ಅಧಿಕ ಪ್ರಕರಣ ಒಂದು ವಾರದಲ್ಲಿ ದಾಖಲಾಗಿದೆ.

ಕಳೆದ ಒಂದು ವಾರದಲ್ಲಿ (ಜುಲೈ 27ರಿಂದ ಆಗಸ್ಟ್ 2) ಭಾರತದಲ್ಲಿ 3,69,588 ಪ್ರಕರಣಗಳು ದಾಖಲಾಗಿದ್ದವು. ಬ್ರೆಝಿಲ್‌ನಲ್ಲಿ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ 3,13,776. ಈ ಅವಧಿಯಲ್ಲಿ ಅಮೆರಿಕದಲ್ಲಿ 4,41,808 ಪ್ರಕರಣಗಳು ದೃಢಪಟ್ಟಿದ್ದವು. ಅದಕ್ಕೂ ಹಿಂದಿನ ವಾರದಲ್ಲಿ ಭಾರತದಲ್ಲಿ 3,17,892 ಪ್ರಕರಣ ದಾಖಲಾಗಿದ್ದರೆ ಬ್ರೆಝಿಲ್‌ನಲ್ಲಿ 3,30,005 ಹಾಗೂ ಅಮೆರಿಕದಲ್ಲಿ 4,73,289 ಪ್ರಕರಣಗಳು ವರದಿಯಾಗಿದ್ದವು.

ಸೋಮವಾರ ಭಾರತದಲ್ಲಿ 49,134 ಹೊಸ ಪ್ರಕರಣಗಳು ಸೇರ್ಪಡೆಯಾಗಿವೆ. ಆರು ದಿನಗಳಲ್ಲಿ ಇದೇ ಮೊದಲ ಬಾರಿಗೆ ದೈನಿಕ ಪ್ರಕರಣಗಳ ಸಂಖ್ಯೆ 50 ಸಾವಿರಕ್ಕಿಂತ ಕಡಿಮೆಯಾಗಿದೆ. ಆದರೆ ಸಾವಿನ ಸಂಖ್ಯೆ 814ಕ್ಕೇರಿದ್ದು, ಶನಿವಾರ ದಾಖಲಾದ 848 ಪ್ರಕರಣಗಳನ್ನು ಹೊರತುಪಡಿಸಿದರೆ ಇದು ಗರಿಷ್ಠ ಸಂಖ್ಯೆಯಾಗಿದೆ. ಕಳೆದ ಮೂರು ತಿಂಗಳಿಂದಲೂ ಸೋಮವಾರ ಕಡಿಮೆ ಸಂಖ್ಯೆಯ ಪ್ರಕರಣಗಳು ವರದಿಯಾಗುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News