'ಅರ್ನಬ್, ದ ನ್ಯೂಸ್ ಪ್ರಾಸ್ಟಿಟ್ಯೂಟ್' ಎಂಬ ಚಿತ್ರದ ಮೂಲಕ ಅರ್ನಬ್ ಗೋಸ್ವಾಮಿ ಬಂಡವಾಳ ಬಯಲು: ರಾಮ್ ಗೋಪಾಲ್ ವರ್ಮಾ

Update: 2020-08-04 04:19 GMT

ಹೊಸದಿಲ್ಲಿ, ಆ.4: ಖ್ಯಾತ ಚಿತ್ರ ನಿರ್ಮಾಪಕ ರಾಮ್‌ಗೋಪಾಲ್ ವರ್ಮಾ ಅವರು, ಅರ್ನಬ್ ಗೋಸ್ವಾಮಿಯವರ ಮುಖವಾಡ ಕಳಚಿ ಹಾಕುವ ತಮ್ಮ ಮುಂದಿನ ಚಿತ್ರದ ಶೀರ್ಷಿಕೆಯನ್ನು ಘೋಷಿಸಿದ್ದಾರೆ. ರಿಪಬ್ಲಿಕ್ ಟಿವಿ ಸಂಸ್ಥಾಪಕರ ಅರ್ಥಹೀನ ಪ್ರಲಾಪದ ಬಗ್ಗೆ ಸೈಫ್ ಅಲಿ ಖಾನ್ ಅವರ ಸಹನಟ ಕುಬ್ಬರಾ ಸೇಟ್ ಹಾಗೂ ಕವಿತಾ ಕೌಸಿಕ್ ವಾಗ್ದಾಳಿ ನಡೆಸಿದ ಬೆನ್ನಲ್ಲೇ 'ಅರ್ನಬ್, ದ ನ್ಯೂಸ್ ಪ್ರಾಸ್ಟಿಟ್ಯೂಟ್' ಎಂಬ ಹೆಸರಿನ ಚಿತ್ರ ನಿರ್ಮಾಣವನ್ನು ವರ್ಮಾ ಪ್ರಕಟಿಸಿದ್ದಾರೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣವನ್ನು ರಿಪಬ್ಲಿಕ್ ಟಿವಿಯ ಅರ್ನಬ್ ಬೋಸ್ವಾಮಿ ಪಟ್ಟು ಬಿಡದೇ ಪ್ರಸಾರ ಮಾಡುವ ಮೂಲಕ ಬಾಲಿವುಡ್ ಚಿತ್ರ ಜಗತ್ತನ್ನು ಕೆಟ್ಟದಾಗಿ ಬಿಂಬಿಸಿದ ಬಗ್ಗೆ ಚಿತ್ರರಂಗದ ಖ್ಯಾತನಾಮರಾದ ಸಲ್ಮಾನ್ ಖಾನ್, ಶಾರುಕ್ ಖಾನ್, ಆದಿತ್ಯ ಚೋಪ್ರ, ಕರಣ್ ಜೋಹರ್ ಅಂಥವರು ಮೌನ ಮುಗಿದು ಧ್ವನಿ ಎತ್ತಬೇಕು ಎಂದು ಅವರು ಒತ್ತಾಯಿಸಿದ್ದಾರೆ.

''ಗ್ಲಾಮರ್, ಹೊಳೆಯುವ ಪರದೆ ಹಿಂದೆ ಕರಾಳ ಮುಖವಿದೆ. ಅದು ಅಪರಾಧ ಮುಖ; ಭೂಗತ ಜಗತ್ತಿನ ಜತೆ ನಂಟು ಬೆಳೆಸಲಾಗಿದೆ ಅಥವಾ ಯುವ ಪ್ರತಿಭಾವಂತ ನಟ ನಟಿಯರ ಲೈಂಗಿಕ ಶೋಷಣೆ ಮುಂದುವರಿದಿದೆ'' ಎಂದು ಅರ್ನಬ್ ಹೇಳಿದ್ದರು.

ಈ ಬಗ್ಗೆ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ವರ್ಮಾ, ''ಬಾಲಿವುಡ್ ಬಗ್ಗೆ ಅರ್ನಬ್ ಇಷ್ಟೊಂದು ಭಯಾನಕವಾಗಿ ಮಾತನಾಡುತ್ತಿರುವುದು ಆಘಾತ ತಂದಿದೆ. ಅಪರಾಧ ಸಂಪರ್ಕ ಹೊಂದಿದ ಕೊಳಕು ಉದ್ಯಮ, ಅತ್ಯಾಚಾರಿಗಳು, ಗ್ಯಾಂಗ್‌ಸ್ಟರ್‌ಗಳು, ಲೈಂಗಿಕ ಶೋಷಕರು ಇದ್ದಾರೆ ಎಂದು ಬಣ್ಣಿಸಿದ್ದಾರೆ. ದಿವ್ಯಾ ಭಾರತಿ, ಝಿಯಾ ಖಾನ್, ಶ್ರೀದೇವಿ ಹಾಗೂ ಸುಶಾಂತ್ ಸಾವನ್ನು ಒಂದೇ ಆಗಿ ಪರಿಗಣಿಸಿ ಹಂತಕ ಬಾಲಿವುಡ್ ಎಂದು ಹೇಗೆ ಹೇಳಿದ್ದಾರೆ. ಈ ನಾಲ್ಕು ಸಾವು 25 ವರ್ಷಗಳ ಅಂತರದಲ್ಲಿ ಸಂಭವಿಸಿದೆ. ಪ್ರತಿಯೊಂದೂ ಸಂಪೂರ್ಣ ಭಿನ್ನ. ಆದರೆ ಅರ್ನಬ್ ಪ್ರಕಾರ ಎಲ್ಲವೂ ಒಂದೇ; ಎಲ್ಲರನ್ನೂ ಹತ್ಯೆ ಮಾಡಿರುವುದು ಬಾಲಿವುಡ್'' ಎಂದು ಸರಣಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಅರ್ನಬ್ ಬಗ್ಗೆಯೇ ಒಂದು ಚಿತ್ರ ನಿರ್ಮಿಸುವುದಾಗಿ ಅವರು ಘೋಷಿಸಿದ್ದಾರೆ. ಇದರಲ್ಲಿ ಅವರ ಭ್ರಷ್ಟ ಮುಖಗಳ ಉದ್ದಗಲವನ್ನು ಬಿಂಬಿಸುವ ಮೂಲಕ ಅವರ ಮುಖವಾಡ ಕಳಚಲಿದ್ದೇನೆ ಎಂದು ಗುಡುಗಿದ್ದಾರೆ. ಅವರ ಕಾರ್ಯವಿಧಾನ ಅಧ್ಯಯನ ಮಾಡಿದ ಬಳಿಕ ನ್ಯೂಸ್ ಪಿಂಪ್ ಅಥವಾ ನ್ಯೂಸ್ ಪ್ರಾಸ್ಟಿಟ್ಯೂಟ್ ಇದರಲ್ಲಿ ಯಾವ ಟ್ಯಾಗ್‌ಲೈನ್ ನೀಡಬೇಕು ಎಂದು ಯೋಚಿಸಿದೆ. ಅಂತಿಮವಾಗಿ ಅವರಿಗೆ ಸೂಕ್ತವಾಗುವುದು ನ್ಯೂಸ್ ಪ್ರಾಸ್ಟಿಟ್ಯೂಟ್ ಎನ್ನುವ ಹೆಸರು ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News