ಕೇಂದ್ರ ಪುರಸ್ಕೃತ ವಸತಿ ಯೋಜನೆ ಶೀಘ್ರ ಪೂರ್ಣಗೊಳಿಸಲು ಸಂಸದ ನಳಿನ್ ಸೂಚನೆ

Update: 2020-08-04 09:42 GMT

ಮಂಗಳೂರು, ಆ.4: ಕೇಂದ್ರ ಪುರಸ್ಕೃತ ಎಲ್ಲ ವಸತಿ ಯೋಜನೆಗಳನ್ನು ಹೆಚ್ಚಿನ ಮುತುವರ್ಜಿ ವಹಿಸಿ ಶೀಘ್ರ ಪೂರ್ಣಗೊಳಿಸಬೇಕು ಎಂದು ಸಂಸದ, ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಎಲ್ಲ ನಗರ ಸ್ಥಳೀಯ ಆಡಳಿತ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಮಂಗಳವಾರ ಜರಗಿದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ವಿವಿಧ ವಸತಿ ಯೋಜನೆಗಳಿಗೆ ಕೇಂದ್ರ ಸರಕಾರ ಈಗಾಗಲೇ ಸಾಕಷ್ಟು ಅನುದಾನ ಬಿಡುಗಡೆ ಮಾಡಿದೆ. ಅನುದಾನವನ್ನು ಸಮರ್ಪಕವಾಗಿ ಬಳಸುವ ಜತೆಗೆ ಅರ್ಹ ಫಲಾನುಭವಿಗಳಿಗೆ ವಸತಿ ನಿರ್ಮಿಸಿಕೊಡಬೇಕು. ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸಿದಿರೆ ಅನುದಾನ ವಾಪಸ್ ಹೋಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದರು.

ಪಚ್ಚನಾಡಿಯ ತ್ಯಾಜ್ಯ ಘಟಕದಿಂದ ಕಳೆದ ಮಳೆಗಾಲದಲ್ಲಿ ಭಾರೀ ಪ್ರಮಾಣದ ತ್ಯಾಜ್ಯ ಹರಿದು ಸಂಭವಿಸಿದ ದುರಂತಕ್ಕೆ ಸಂಬಂಧಿಸಿ ಈ ಹಿಂದಿನ ಸಭೆಯಲ್ಲಿ ನೀಡಲಾದ ಸೂಚನೆಯಂತೆ ತನಿಖೆ ನಡೆಸಲು ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿ ಇಲ್ಲಿಯ ವರೆಗೆ ವರದಿ ನೀಡದಿರುವ ಕುರಿತು ಸಂಸದ ನಳಿನ್ ಅಧಿಕಾರಿಗಳನ್ನು ತರಾಟೆಗೈದರು. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ, ಜಂಟಿ ನಿರ್ದೇಶಕ ದರ್ಜೆಯ ಅಧಿಕಾರಿ ನೇತೃತ್ವದ 4 ಮಂದಿಯ ಸಮಿತಿ ರಚಿಸಿ, ವಾರದಲ್ಲಿ ವರದಿ ನೀಡುವಂತೆ ನಗರಾಭಿವೃದ್ಧಿ ಕೋಶದ ಜಿಲ್ಲಾ ಯೋಜನಾಧಿಕಾರಿ ಗಾಯತ್ರಿ ನಾಯಕ್ ಅವರಿಗೆ ಸೂಚಿಸಿದರು.

ಅಪಾರ್ಟ್‌ಮೆಂಟ್‌ಗಳಲ್ಲಿ ಎಸ್‌ಟಿಪಿ ಇದ್ದಲ್ಲಿ ಮಾತ್ರ ನಿರ್ಮಾಣಕ್ಕೆ ಅನುಮತಿ
 ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಘನತ್ಯಾಜ್ಯ ಮತ್ತು ದ್ರವ ತ್ಯಾಜ್ಯಗಳ ವಿಲೇವಾರಿ ಸರಿಯಾಗಿ ನಡೆಯಬೇಕಿದೆ. ಆದ್ದರಿಂದ ಹೊಸ ಅಪಾರ್ಟ್‌ಮೆಂಟ್/ ಕಾಂಪ್ಲೆಕ್‌ಗಳಲ್ಲಿ ಎಸ್‌ಟಿಪಿ ಕಡ್ಡಾಯವಾಗಿ ಅಳವಡಿಸಿದರೆ ಮಾತ್ರ ನಿರ್ಮಾಣಕ್ಕೆ ಅನುಮತಿ ನೀಡಬೇಕು. ಜಾಗ ಇದ್ದು ಅಳವಡಿಕೆ ಮಾಡದವರಿಗೆ ನೋಟಿಸ್ ನೀಡಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲು ಸಭೆಯಲ್ಲಿ ನಿರ್ದೇಶಿಸಿದರು.

ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸಿಇಒ ಡಾ.ಸೆಲ್ವಮಣಿ ಆರ್., ಶಾಸಕ ಉಮಾನಾಥ ಕೋಟ್ಯಾನ್ ಭಾಗವಹಿಸಿದ್ದರು.


ಮನಪಾ: 100 ಕಡೆಗಳಲ್ಲಿ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟಿಂಗ್ ಕೇಂದ್ರ
ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ದಿನ 1 ಸಾವಿರ ಕೊರೋನ ಪರೀಕ್ಷೆಗಳು ನಡೆಯುವ ನಿಟ್ಟಿನಲ್ಲಿ 100 ಕಡೆಗಳಲ್ಲಿ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟಿಂಗ್ ಕೇಂದ್ರಗಳನ್ನು ತೆರೆಯಲಾಗುವುದು. ಇತರ ನಗರ ಸ್ಥಳೀಯ ಸಂಸ್ಥೆಗಳಲ್ಲೂ ಇದನ್ನು ಅನುಸರಿಸಬೇಕು
-ಡಾ.ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ, ದ.ಕ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News