ರಾಮ ಮಂದಿರ ಕುರಿತು ಆರ್ ಟಿಐ ಅರ್ಜಿಗಳ ಬಗ್ಗೆ ಮೌನ ವಹಿಸಿದ ಕೇಂದ್ರ ಸರಕಾರ

Update: 2020-08-04 10:04 GMT

ಹೊಸದಿಲ್ಲಿ: ಬಿಜೆಪಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸ ಹಾಗೂ ರಾಮ ಮಂದಿರ ನಿರ್ಮಾಣ ಕುರಿತು ಬಹಳಷ್ಟು ಮಾತನಾಡುತ್ತದೆಯಾದರೂ ಈ ಕುರಿತಾದ ಆರ್‍ ಟಿಐ ಅರ್ಜಿಗಳಿಗೆ ಉತ್ತರ ನೀಡುವಲ್ಲಿ ಕೇಂದ್ರದ ನರೇಂದ್ರ ಮೋದಿ ಸರಕಾರಿ ಆಸಕ್ತಿ ವಹಿಸಿಲ್ಲ ಎಂದು thewire.in ವರದಿ ಮಾಡಿದೆ.

ಅಯೋಧ್ಯೆ ವಿವಾದ ಕುರಿತಂತೆ ಸುಪ್ರೀಂ ಕೋರ್ಟ್ 2019ರಲ್ಲಿ ನೀಡಿದ ತೀರ್ಪಿಗೆ ಮುಂಚೆ ಹಾಗೂ ತೀರ್ಪು ನೀಡಿದ ನಂತರ  ಸಲ್ಲಿಸಲಾಗಿದ್ದ ಎರಡು ಆರ್‍ ಟಿಐ ಅರ್ಜಿಗಳ ಕುರಿತಂತೆ ಕೇಂದ್ರ ಮೌನ ತಾಳಿದೆ.

ಅಯೋಧ್ಯೆಯಲ್ಲಿ ನವೆಂಬರ್ 2018ರಲ್ಲಿ ವಿಶ್ವ ಹಿಂದು ಪರಿಷದ್ ಹಾಗೂ ಆರೆಸ್ಸೆಸ್ ಜಂಟಿಯಾಗಿ ಧರ್ಮ ಸಂಸದ್ ಆಯೋಜಿಸಿದ್ದವು. ಇದಾದ ಕೆಲ ದಿನಗಳ ನಂತರ ನವೆಂಬರ್ 27, 2018ರಂದು ಲಕ್ನೋ ಮೂಲದ ಆರ್ ಟಿಐ ಕಾರ್ಯಕರ್ತೆ ನೂತನ್ ಠಾಕುರ್ ಅರ್ಜಿ ಸಲ್ಲಿಸಿ ಧರ್ಮ ಸಂಸದ್ ಕುರಿತಂತೆ ಪ್ರಧಾನಿ ಹಾಗೂ/ಅಥವಾ ಪ್ರಧಾನಿ ಕಚೇರಿಯು ಹಾಗೂ ಗೃಹ ವ್ಯವಹಾರಗಳ ಸಚಿವಾಲಯ ಉತ್ತರ ಪ್ರದೇಶ ಸರಕಾರಕ್ಕೆ ನೀಡಿದ್ದ ಸೂಚನೆಗಳ ಕುರಿತು  ಮಾಹಿತಿ ಕೋರಿದ್ದರು.

ಆದರೆ ಆಕೆಯ ಅರ್ಜಿಗೆ ಉತ್ತರಿಸುವ ಬದಲು ಆಕೆ ಕೇಳಿದ ಮಾಹಿತಿ ‘ವಿವೇಚನಾರಹಿತವಾಗಿದೆ’ ಎಂದು ಹೇಳಿ ಮುಖ್ಯ ಮಾಹಿತಿ  ಅಧಿಕಾರಿ   ಉತ್ತರಿಸಿದ್ದರು. ನಂತರ ಠಾಕುರ್ ಇದರ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರೂ  ಮೊದಲಿನ ಪ್ರತಿಕ್ರಿಯೆಯನ್ನೇ ಎತ್ತಿ ಹಿಡಿಯಲಾಗಿತ್ತು. ನೂತನ್ ಠಾಕುರ್ ಅವರು ನಂತರ ಕೇಂದ್ರ ಮಾಹಿತಿ ಆಯೋಗದ ಕದ ತಟ್ಟಿದ್ದು ವಿಚಾರಣೆ ಜೂನ್ ತಿಂಗಳಲ್ಲಿ ನಡೆದಾಗ  ಮುಖ್ಯ ಮಾಹಿತಿ ಆಯುಕ್ತ ಬಿಮಲ್ ಜುಲ್ಕಾ ಅವರು ಮಾತನಾಡಿ ಅರ್ಜಿದಾರೆ ಯಾವುದೇ ನಿರ್ದಿಷ್ಟ  ಮಾಹಿತಿ ಕೇಳಿಲ್ಲ ಎಂದಿದ್ದರು.

ಇನ್ನೊಂದು ಪ್ರಕರಣದಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ರಚಿಸಲಾಗಿದ್ದ ಟ್ರಸ್ಟ್‍ನ ಟ್ರಸ್ಟಿಗಳ ಮಾಹಿತಿ ಕೋರಿ ಆರ್‍ ಟಿಐ ಕಾರ್ಯಕರ್ತ ಸುಶೀಲ್ ರಾಘವ್ ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಿದ್ದ ಆರ್‍ಟಿಐ ಅರ್ಜಿಗೆ ಕೂಡ ಸೂಕ್ತ ಉತ್ತರ ದೊರಕಿಲ್ಲ. ರಾಘವ್ ಅವರು ಟ್ರಸ್ಟೀಗಳ ಹೆಸರು, ಅವರನ್ನು ಏಕೆ ಟ್ರಸ್ಟೀಗಳನ್ನಾಗಿ ಆರಿಸಲಾಗಿದೆ, ಅವರ ವಿರುದ್ಧ ಇರುವ ಕ್ರಿಮಿನಲ್ ಕೇಸುಗಳು,  ಟ್ರಸ್ಟ್ ರಚನೆಯ ಕುರಿತಾದ ಪ್ರತಿ, ಅದರ ಹಣಕಾಸು ವಿಚಾರ ಹಾಗೂ ಕಾರ್ಯೋದ್ದೇಶದ ಮಾಹಿತಿಯನ್ನು ಕೋರಿದ್ದರು.

ಈ ಅರ್ಜಿಗೆ ಒಂದು ವಾರದೊಳಗೆ ಉತ್ತರ ನೀಡಿದ ಗೃಹ ಸಚಿವಾಲಯವು ಕೋರಲಾದ ಮಾಹಿತಿಯು ಆರ್‍ಟಿಐ ಕಾಯಿದೆ 2005 ಇದರ ಸೆಕ್ಷನ್ 88ರ ಅಡಿಯಲ್ಲಿ ಬರುವುದರಿಂದ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News