ಟೈಮ್ಸ್ ಸ್ಕ್ವೇರ್ ‍ನಲ್ಲಿ ರಾಮ ಮಂದಿರದ ಚಿತ್ರ ಪ್ರದರ್ಶನಕ್ಕೆ ನಾಗರಿಕ ಹಕ್ಕುಗಳ ಸಂಘಟನೆಗಳ ವಿರೋಧ

Update: 2020-08-04 12:34 GMT

ಸ್ಯಾನ್ ಫ್ರಾನ್ಸಿಸ್ಕೋ : ನಾಳೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿರುವುದರಿಂದ ಆ ದಿನ ಟೈಮ್ಸ್ ಸ್ಕ್ವೇರ್ ಪ್ರದೇಶದಲ್ಲಿ ಶ್ರೀ ರಾಮನ ಚಿತ್ರಗಳನ್ನು ಅಲ್ಲಿನ ಕಟ್ಟಡಗಳ ಎದುರಿರುವ ಪರದೆಯಲ್ಲಿ ಮೂಡಿಸುವ ಕೆಲ ಸಂಘಟನೆಗಳ ಯೋಜನೆಯನ್ನು ಎಲ್ಲಾ ಧರ್ಮಗಳ ಸದಸ್ಯರನ್ನೊಳಗೊಂಡ ಅಮೆರಿಕಾದ ದಕ್ಷಿಣ ಏಷ್ಯನ್ನರ ನಾಗರಿಕ ಹಕ್ಕುಗಳ ಸಂಘಟನೆಗಳು ವಿರೋಧಿಸಿವೆ.

ಈಗಾಗಲೇ ಈ ಸಂಘಟನೆಗಳು ಈ ಕುರಿತಂತೆ ನ್ಯೂಯಾರ್ಕ್ ಮೇಯರ್ ಬಿಲ್ ಡಿ ಬ್ಲಾಸಿಯೋ ಅವರಿಗೆ ಮನವಿಯನ್ನೂ ಸಲ್ಲಿಸಿವೆ.

‘ನ್ಯೂಯಾರ್ಕ್ ನ ಮುಸ್ಲಿಮರನ್ನು ಅವಮಾನಿಸಿ ಹಾಗೂ  ಭಾರತದಲ್ಲಿ ಮುಸ್ಲಿಮರ ವಿರುದ್ಧದ ಮಾನವ ಹಕ್ಕು ಉಲ್ಲಂಘನೆಗಳನ್ನು ಸಂಭ್ರಮಿಸಲು ಟೈಮ್ಸ್ ಸ್ಕ್ವೇರ್ ‍ನಲ್ಲಿ ಇಸ್ಲಾಮೋಫೋಬಿಕ್ ಬಿಲ್ ಬೋರ್ಡ್ ಗಳನ್ನು ಹಾಕುವುದಕ್ಕೆ’ ಪತ್ರದಲ್ಲಿ ವಿರೋಧ ವ್ಯಕ್ತಪಡಿಸಲಾಗಿದೆ.

ಈ ಪತ್ರಕ್ಕೆ ಕೋಯಲಿಶನ್ ಅಗೇನ್ಸ್ಟ್ ಫ್ಯಾಶಿಸಂ ಇನ್ ಇಂಡಿಯಾ, ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್, ಅಂಬೇಡ್ಕರ್ ಕಿಂಗ್ ಸ್ಟಡಿ ಸರ್ಕಲ್, ಇಂಡಿಯನ್ ಅಮೆರಿಕನ್ ಮುಸ್ಲಿಂ ಕೌನ್ಸಿಲ್ ಸಹಿತ ಹಲವು ಸಂಘಟನೆಗಳು ಸಹಿ ಹಾಕಿವೆ.

ರಾಮ ಮಂದಿರ ಕುರಿತಾದ ಹೋರ್ಡಿಂಗ್ ‍ಗಳನ್ನು ಹಾಕದಂತೆ ಕೆಲ ಜಾಹೀರಾತು ಏಜನ್ಸಿಗಳನ್ನು ಸಂಘಟನೆ ಸಂಪರ್ಕಿಸಿ ಮನವಿ ಮಾಡಿವೆ ಎನ್ನಲಾಗಿದೆ.

‘ಜೈ ಶ್ರೀರಾಮ್’ ಎಂಬ ಪದಗಳು, ಶ್ರೀ ರಾಮನ ಚಿತ್ರ ಹಾಗೂ ಮಂದಿರದ ಚಿತ್ರಗಳನ್ನು ಟೈಮ್ಸ್ ಸ್ಕ್ವೇರ್ ಸಹಿತ ಅಲ್ಲಿನ ನಾಸ್ಡ್ಯಾಖ್ ಪರದೆಯಲ್ಲಿ ಮೂಡಿಸಲು  ಏರ್ಪಾಟುಗಳನ್ನು ಮಾಡಲಾಗುತ್ತಿದೆ ಎಂದು ಅಮೆರಿಕನ್ ಇಂಡಿಯಾ ಪಬ್ಲಿಕ್ ಅಫೇರ್ಸ್ ಸಮಿತಿ ಅಧ್ಯಕ್ಷ  ಜಗದೀಶ್ ಸೆಹ್ವಾನಿ ಕಳೆದ ವಾರ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News