ಸಿವಿಲ್ ನ್ಯಾಯಾಧೀಶೆಯಾಗಿ ಮಂಗಳೂರಿನ ಅಸ್ರೀನಾ

Update: 2020-08-04 13:47 GMT

ಮಂಗಳೂರು, ಆ.4: ಮಂಗಳೂರು ಮೂಲದ ಅಸ್ರೀನಾ ಸಿವಿಲ್ ನ್ಯಾಯಾಧೀಶೆಯಾಗಿ ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಂದ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಮೂಲತಃ ಹಳೆಯಂಗಡಿಯ ಅಕ್ಬರ್ ಅಲಿ ಮತ್ತು ಅಸ್ಮತ್ ದಂಪತಿಯ ಪುತ್ರಿಯಾಗಿರುವ ಅಸ್ರೀನಾ ಸದ್ಯ ಕೃಷ್ಣಾಪುರದ ಚೊಕ್ಕಬೆಟ್ಟುವಿನಲ್ಲಿ ನೆಲೆಸಿದ್ದಾರೆ. ಹಳೆಯಂಗಡಿ, ಕಿನ್ನಿಗೋಳಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪಡೆದ ಇವರು ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. ಬಳಿಕ ಮಂಗಳೂರಿನ ಹಿರಿಯ ನ್ಯಾಯವಾದಿಗಳಾದ ಮಯೂರಾ ಕೀರ್ತಿ ಮತ್ತು ಶರತ್ ಕುಮಾರ್ ಬಿ. ಮಾರ್ಗದರ್ಶನದಲ್ಲಿ ವಕೀಲೆ ವೃತ್ತಿಜೀವನ ಆರಂಭಿಸಿದರು. 2019ರಲ್ಲಿ ನ್ಯಾಯಾಧೀಶ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು.

ಅಸ್ರೀನಾರ ತಂದೆ ಅಕ್ಬರ್ ಅಲಿ ಹಳೆಯಂಗಡಿಯವರಾದರೆ, ತಾಯಿ ಅಸ್ಮತ್ ಜೋಕಟ್ಟೆ ಮೂಲದವರು. ಅಕ್ಬರ್ ಅಲಿ ಎಂಆರ್‌ಪಿಎಲ್ ಉದ್ಯೋಗಿಯಾದರೆ, ಅಸ್ಮತ್ ಗೃಹಿಣಿಯಾಗಿದ್ದಾರೆ. ಈ ದಂಪತಿಗೆ ಮೂವರು ಹೆಣ್ಮಕ್ಕಳು. ಮೂವರೂ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈದಿದ್ದಾರೆ. ಅಸ್ರೀನಾ ನ್ಯಾಯಾಧೀಶೆಯಾದರೆ, ಇವರ ಅಕ್ಕ ಪಿಎ ಕಾಲೇಜಿನಲ್ಲಿ ಉಪನ್ಯಾಸಕಿ ಮತ್ತು ತಂಗಿ ನಗರದ ಖಾಸಗಿ ಕಾಲೇಜಿನಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.

''ಬಾಲ್ಯದಲ್ಲೇ ನನಗೆ ಏನಾದರೊಂದು ಸಾಧಿಸಬೇಕು ಎಂಬ ಛಲವಿತ್ತು. ಆದರೆ ಇಂತಹದ್ದೇ ಆಗಬೇಕು ಎಂಬ ಗುರಿ ಇರಲಿಲ್ಲ. ಎಸ್‌ಡಿಎಂ ಕಾನೂನು ಕಾಲೇಜಿಗೆ ಸೇರಿದ ಬಳಿಕ ನ್ಯಾಯಾಧೀಶೆಯಾಗಬೇಕೆಂಬ ಹಂಬಲವುಂಟಾಯಿತು. ಈ ನಿಟ್ಟಿನಲ್ಲೇ ಪ್ರಯತ್ನ ನಡೆಸಿದೆ. ನನ್ನ ಅಜ್ಜಂದಿರಾದ ಶೇಖ್ ಆದಂ ಮತ್ತು ಕಯ್ಯಿಳಿ ಬಾವಾಕ ಹಾಗೂ ಅಜ್ಜಿಯಂದಿರಾದ ಸಲೀಮಮ್ಮ ಮತ್ತು ಅತ್ತಿಮೋಳು(ಅತೀಜಮ್ಮ), ನನ್ನ ತಂದೆ-ತಾಯಿ ಮತ್ತು ಕುಟುಂಬದ ಎಲ್ಲ ಸದಸ್ಯರ ಪ್ರೋತ್ಸಾಹ, ವಕೀಲೆ ವೃತ್ತಿಯಲ್ಲಿ ಹಿರಿಯ ನ್ಯಾಯವಾದಿಗಳು ನೀಡಿದ ಮಾರ್ಗದರ್ಶನದ ಜೊತೆಗೆ ನನ್ನ ಕಠಿಣ ಪರಿಶ್ರಮದ ಫಲವಾಗಿ ನ್ಯಾಯಾಧೀಶೆಯಾಗಿ ಸೇವೆ ಸಲ್ಲಿಸುವ ಅವಕಾಶ ಲಭಿಸಿದೆ.''

-ಅಸ್ರೀನಾ, ಸಿವಿಲ್ ನ್ಯಾಯಾಧೀಶೆ

''ನನಗೂ ಕಲಿಯಬೇಕು ಎಂದು ತುಂಬಾ ಅಸೆ ಇತ್ತು. ಆದರೆ ಆ ಕಾಲದ ನಮ್ಮ ಹಿರಿಯರು ಹೆಣ್ಮಕ್ಕಳಿಗೆ ಕಲಿಯಲು ಅವಕಾಶ ಕಲ್ಪಿಸಿಕೊಡುತ್ತಿ ರಲಿಲ್ಲ. ಹಾಗಾಗಿ ನಾನು ಶಿಕ್ಷಣದಿಂದ ವಂಚಿತನಾದರೂ ನಮ್ಮ ಕುಟುಂಬದಿಂದ ಹೆಣ್ಮಕ್ಕಳು ಕಲಿತು ಏನಾದರೊಂದು ಸಾಧಿಸಬೇಕು ಎಂದು ನಾನು ಈ ಹಿಂದೆಯೇ ಕನಸು ಕಂಡಿದ್ದೆ. ಅದನ್ನು ನನ್ನ ಮೊಮ್ಮಗಳು ಸಾಧಿಸಿ ತೋರಿಸಿದಳು. ಇದು ಸಂತಸ ತಂದಿದೆ.''
-ಅತೀಜಮ್ಮ, ಅಸ್ರೀನಾರ ಅಜ್ಜಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News