ಬಿರುಗಾಳಿ ಸಹಿತ ವರುಣಾರ್ಭಟ : ದ.ಕ. ಜಿಲ್ಲೆಯಲ್ಲಿ ‘ರೆಡ್ ಅಲರ್ಟ್’ ಘೋಷಣೆ

Update: 2020-08-04 14:18 GMT

ಮಂಗಳೂರು, ಆ.4: ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣ ಏರ್ಪಟಿದ್ದು, ಪರಿಣಾಮ ಮುಂದಿನ ದಿನಗಳಲ್ಲಿ ಮುಂಗಾರು ಮಳೆ ಮತ್ತಷ್ಟು ಚುರುಕು ಪಡೆಯಲಿದೆ. ಜಿಲ್ಲೆಯಲ್ಲಿ ಸುಮಾರು 204.4 ಮಿ.ಮೀ. ಪ್ರಮಾಣದ ವ್ಯಾಪಕ ಮಳೆ ಬೀಳಲಿದ್ದು, ಆ.5ರವರೆಗೆ ಹವಾಮಾನ ಇಲಾಖೆಯು ‘ರೆಡ್ ಅಲರ್ಟ್’ ಘೋಷಣೆ ಮಾಡಿದೆ.

ಜಿಲ್ಲೆಯಲ್ಲಿ ಮುಂದಿನ ನಾಲ್ಕು ದಿನ ಭಾರೀ ಮಳೆಯಾಗಲಿದ್ದು, ಆ.6ರಿಂದ 8ರವರೆಗೆ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಈ ಸಂದರ್ಭ 115.6 ಮಿ.ಮೀ.ನಿಂದ 204.4 ಮಿ.ಮೀ.ವರೆಗೆ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣ ಏರ್ಪಟಿದ್ದು, ಕರಾವಳಿ ಪ್ರದೇಶದಲ್ಲಿ ವರುಣನ ಆರ್ಭಟ ಮುಂದುವರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧೆಡೆ ಭಾರೀ ಮಳೆ ಸುರಿದು ಅಪಾರ ಹಾನಿ ಸಂಭವಿಸಿದೆ. ಮಳೆಯ ಜೊತೆಗೆ ಬಿರುಗಾಳಿ ಬೀಸುತ್ತಿರುವುದು ಆತಂಕ ಮೂಡಿಸಿದ್ದು, ಕಡಲ ತೀರ ಪ್ರದೇಶಗಳಲ್ಲಿ ಕಡಲಬ್ಬರ ಹೆಚ್ಚಿದೆ.

ಸೋಮವಾರ ರಾತ್ರಿಯಿಂದಲೇ ಮಳೆ ಬಿರುಸು ಪಡೆದಿದೆ. ಮಂಗಳವಾರ ಇಡೀ ದಿನ ಭಾರೀ ಮಳೆಯಾಗಿದೆ. ಈ ನಡುವೆ ಆಗಾಗ ಸೋನೆ ಮಳೆ ಸುರಿಸುತ್ತಾ, ಸಾಧಾರಣದಿಂದ ಧಾರಾಕಾರ ಮಳೆಯತ್ತ ವೇಗ ಪಡೆದುಕೊಳ್ಳುತ್ತಿತ್ತು. ಇದರಿಂದಾಗಿ ಜನಜೀವನ ಬಹುತೇಕ ಅಸ್ತವ್ಯಸ್ತಗೊಂಡಿತು.
ಕರಾವಳಿಯಲ್ಲಿ ಸುರಿದ ಭಾರೀ ಮಳೆಗೆ ದ.ಕ. ಜಿಲ್ಲೆಯ ವಿವಿಧೆಡೆ ಭಾರೀ ಹಾನಿ ಸಂಭವಿಸಿದೆ.

ಮಂಗಳೂರು ನಗರದ ಬೋಳೂರಿನಲ್ಲಿ ಮರ ಮತ್ತು ನಾಲ್ಕು ವಿದ್ಯುತ್ ಕಂಬಗಳು ನೆಲಸಮವಾಗಿದೆ. ನಗರದ ಸರ್ಕ್ಯೂಟ್ ಹೌಸ್ ಸಮೀಪದಲ್ಲಿ ಅಲ್ಪ ಪ್ರಮಾಣದ ಗುಡ್ಡ ಜರಿತ ಸಂಭವಿಸಿದೆ.

ಬೆಳ್ತಂಡಿಯಲ್ಲೂ ವಾಹನವೊಂದರ ಮೇಲೆ ವಿದ್ಯುತ್ ಕಂಬ ಬಿದ್ದಿದ್ದು, ವಾಹನ ಜಖಂಗೊಂಡಿದೆ. ಘಟನೆಯಲ್ಲಿ ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವಾಹನ ವೇಣೂರಿನಿಂದ ಗುರುವಾಯಮಕೆರೆ ಕಡೆಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ.

ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿ ಬರುವ ಚಾರ್ಮಾಡಿ ಘಾಟ್‌ನ ರಸ್ತೆಯ ವಿವಿಧೆಡೆ ಭೂಕುಸಿತ ಸಂಭವಿಸಿದೆ. ಅಧಿಕಾರಿಗಳು ಮಣ್ಣನ್ನು ಕೂಡಲೇ ತೆರವುಗೊಳಿಸಿದ್ದಾರೆ. ಪದವಿನಂಗಡಿಯಲ್ಲಿ ಎರಡು ಮರಗಳು ಉರುಳಿವೆ. ಇದರಿಂದ ಮನೆಯೊಂದಕ್ಕೆ ಹಾನಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಜಿಲ್ಲೆಯಲ್ಲಿ ಕಳೆದ ಮೂರು-ನಾಲ್ಕು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಘಟ್ಟ ಪ್ರದೇಶಗಳಲ್ಲಿಯೂ ಉತ್ತಮ ಮಳೆಯಾಗುತ್ತಿರುವುದರಿಂದ ನದಿಗಳಲ್ಲಿಯೂ ನೀರಿನ ಪ್ರಮಾಣ ಹೆಚ್ಚಾಗಿದೆ. ಜಿಲ್ಲೆಯ ಪಲ್ಗುಣಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದೆ. ಇತರೆಡೆಗಳಲ್ಲೂ ನದಿ ಪಾತ್ರದ ತಗ್ಗು ಪ್ರದೇಶಗಳಲ್ಲಿ ನೆರೆ ಭೀತಿ ಉಂಟಾಗಿದೆ.

ಉಳ್ಳಾಲದಲ್ಲಿ ಬಿರುಗಾಳಿಗೆ ಕಡಲಿನ ಅಬ್ಬರ ಹೆಚ್ಚಾಗಿದ್ದು, ಕಡಲಿಗೆ ಸಮೀಪವಿರುವ ನಿವಾಸಿಗಳಲ್ಲಿ ಆತಂಕ ಹೆಚ್ಚಿದೆ. ಕಳೆದ ವರ್ಷ ಆ. 4ಕ್ಕೆ ಜಿಲ್ಲೆಯಲ್ಲಿ 21.5 ಮಿ.ಮೀ. ಮಳೆಯಾಗಿದ್ದರೆ, ಈ ಬಾರಿ ಇದೇ ದಿನ 73.1 ಮಿ.ಮೀ. ಮಳೆಯಾಗಿದೆ.

ಸಮುದ್ರ ಪ್ರಕ್ಷುಬ್ಧ: ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣ ಏರ್ಪಟ್ಟಿದ್ದು, ಭಾರೀ ಗಾತ್ರದ ಅಲೆಗಳು ಕಡಲತೀರಕ್ಕೆ ಅಪ್ಪಳಿಸುತ್ತಿವೆ. 3.2ರಿಂದ 4.1 ಮೀಟರ್‌ವರೆಗೆ ಅಲೆಗಳು ಎತ್ತರಕ್ಕೆ ಚಿಮ್ಮುತ್ತಿವೆ. ಮಂಗಳೂರಿಂದ ಕಾರವಾರದವರೆಗೂ ಆ.5ರಂದು ರಾತ್ರಿ 11:30ರವರೆಗೆ ಇದೇ ಪರಿಸ್ಥಿತಿ ಮುಂದುವರಿಯಲಿದೆ. ಮೇಲ್ಮೈ ಪ್ರಸ್ತುತ ವೇಗವು ಸೆಕೆಂಡ್‌ಗೆ 43-69 ಸೆಂಟಿ ಮೀಟರ್‌ವರೆಗೆ ತಲುಪಲಿದೆ. ಈ ಸಂದರ್ಭ ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಸೂಚಿಸಲಾಗಿದೆ.

ರಾಜ್ಯದ ಕರಾವಳಿಯಲ್ಲಿ 50-60 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚಿನ ಸ್ಥಳಗಳಲ್ಲಿ ವ್ಯಾಪಕ ಮಳೆ ಸುರಿಯುವ ಸಾಧ್ಯತೆ ಇದೆ. ಬಿರುಗಾಳಿ ಸಹಿತ ಮಳೆಯು ತನ್ನ ಆರ್ಟಟವನ್ನು ಮುಂದುವರಿಸುವ ಲಕ್ಷಣಗಳು ಕಂಡುಬರುತ್ತಿವೆ. ಮುಂದಿನ 24 ಗಂಟೆಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ವರದಿ ತಿಳಿಸಿದೆ.

ಕೊಲ್ಲೂರು ದಾಖಲೆ ಮಳೆ: ಕರಾವಳಿ ಜಿಲ್ಲೆಗಳಲ್ಲಿ ವರ್ಷಧಾರೆ ಮುಂದುವರಿದಿದ್ದು, ಉಡುಪಿಯ ಕೊಲ್ಲೂರಿನಲ್ಲಿ 20 ಸೆಂ.ಮೀ. ಮಳೆ ಸುರಿದಿದೆ. ಈ ಮೂಲಕ ಕರಾವಳಿ ಪ್ರದೇಶದಲ್ಲೇ ಮಂಗಳವಾರ ಇಲ್ಲಿ ಸುರಿದದ್ದು ಅತಿಹೆಚ್ಚು ಮಳೆಯೆಂದು ದಾಖಲಾಗಿದೆ. ಉಡುಪಿಯ ಕಾರ್ಕಳ, ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ತಲಾ ಎಂಟು ಸೆಂ.ಮೀ. ಮಳೆಯಾಗಿದೆ. ಸುಬ್ರಹ್ಮಣ್ಯ, ಸುಳ್ಯ, ಕುಂದಾಪುರ ತಾಲೂಕಿನಲ್ಲಿ ತಲಾ ಏಳು ಸೆಂ.ಮೀ. ಮಳೆ ಸುರಿದಿದೆ.

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಪುತ್ತೂರು, ಉಪ್ಪಿನಂಗಡಿಯಲ್ಲಿ ತಲಾ ಆರು ಸೆಂ.ಮೀ., ಮೂಡುಬಿದಿರೆ, ಮಾಣಿ, ಉಡುಪಿಯ ಕೋಟದಲ್ಲಿ ತಲಾ ಐದು ಸೆಂ.ಮೀ. ಮಳೆಯಾಗಿದೆ. ಮಂಗಳೂರು ನಗರದಲ್ಲಿ ಮೂರು ಸೆಂ.ಮೀ., ಮೂಲ್ಕಿಯಲ್ಲಿ ಎರಡು ಸೆಂ.ಮೀ. ಸುರಿದಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ವರದಿ ತಿಳಿಸಿದೆ.

1077 ಕರೆ ಮಾಡಿ

ದ.ಕ. ಜಿಲ್ಲೆಯಲ್ಲಿ ಉಂಟಾಗುವ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳು ಇದ್ದಲ್ಲಿ ತುರ್ತು ಸೇವೆಗಾಗಿ ಟಾಲ್‌ಫ್ರೀ ನಂಬರ್ 1077ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News