ಎಸ್‌ಐ ಸಮ್ಮುಖದಲ್ಲಿ ಬಜರಂಗದಳ ಕಾರ್ಯಕರ್ತರಿಂದ ಅರೆನಗ್ನಗೊಳಿಸಿ ಹಲ್ಲೆ: ಆದಿವಾಸಿ ವ್ಯಕ್ತಿಯಿಂದ ಐಜಿಪಿ, ಎಸ್ಪಿಗೆ ದೂರು

Update: 2020-08-04 16:05 GMT

ಕಾರ್ಕಳ, ಆ.4: ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಮ್ಮುಖದಲ್ಲಿ ಬಜರಂಗ ದಳದ ಕಾರ್ಯಕರ್ತರು ತನಗೆ ಜಾತಿ ನಿಂದನೆಗೈದು, ಅರೆನಗ್ನಗೊಳಿಸಿ ಹಲ್ಲೆ ನಡೆಸಿದ್ದಾರೆ ಎಂದು ಈದು ಗ್ರಾಮದ ಜಂಗೊಟ್ಟು ಕಾಲನಿ ಮನೆಯ ಸೀತಾರಾಮ ಮಲೆಕುಡಿಯ ಎಂಬವರು ಮಂಗಳೂರು ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕರಿಗೆ ಹಾಗೂ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರು ಸಲ್ಲಿಸಿದ್ದಾರೆ.

ಪರಿಶಿಷ್ಟ ಪಂಗಡದ ಆದಿವಾಸಿ ಮಲೆಕುಡಿಯ ಸಮುದಾಯಕ್ಕೆ ಸೇರಿದ ಸೀತಾರಾಮ ಮಲೆಕುಡಿಯ ಕೂಲಿ ಕಾರ್ಮಿಕನಾಗಿದ್ದು, ಕೃಷಿ ಚಟುವಟಿಕೆಯ ಜೊತೆಗೆ ಹೈನುಗಾರಿಕೆಯನ್ನು ನಡೆಸುತಿದ್ದಾರೆ. ಮನೆಯಲ್ಲಿ ಆಡು, ಹಸುಗಳನ್ನು ಸಾಕುತಿದ್ದಾರೆ. ಕಳೆದ ಜು. 22ರಂದು ಬೆಳಗ್ಗೆ ನೆರೆಕರೆಯ ಬಾಹು ಪೂಜಾರಿ ಎಂಬವರಿಂದ ತಾನು ಹಸುವೊಂದನ್ನು ಖರೀದಿ ಮಾಡಿದ್ದು, ಅದನ್ನು ಬಾಬು ಪೂಜಾರಿ ಹಾಗೂ ಸುಜಯ ದೇವಾಡಿಗ ಎಂಬವರು ತನ್ನ ಮನೆಗೆ ತಂದು ಹಟ್ಟಿಯಲ್ಲಿ ಕಟ್ಟಿದ್ದರು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಅದೇ ದಿನ ಸಂಜೆ 6:30ರ ಸುಮಾರಿಗೆ ಈದು ಕ್ರಾಸ್ ಬಳಿಯ ಅಬ್ದುಲ್ ರಹ್ಮಾನ್ ಎಂಬವರು ಬಕ್ರಿದ್ ಹಬ್ಬದ ಸಲುವಾಗಿ ಆಡು ಖರೀದಿಗೆ ನನ್ನ ಮನೆಗೆ ಬಂದಿದ್ದರು. ಇದನ್ನು ತಪ್ಪಾಗಿ ತಿಳಿದುಕೊಂಡ ಬಜರಂಗ ದಳದ ಕಾರ್ಯಕರ್ತರು ಒಟ್ಟು ಸೇರಿ, ನನ್ನ ಮನೆಯಿಂದ ಸುಮಾರು ಎರಡು ಪರ್ಲಾಂಗ್ ದೂರದ ರಸ್ತೆಯಲ್ಲಿ ಪ್ರಯಾಣಿಸುತಿದ್ದ ಅವರ ಕಾರನ್ನು ಅಡ್ಡಗಟ್ಟಿ ಕಾರನ್ನು ದ್ವಂಸಗೈದು ಅವರಿಗೆ ತಲವಾರಿನಿಂದ ಕಡಿದು ಗಂಭೀರ ಗಾಯಗೊಳಿಸಿದ್ದಾರೆ. ಬಳಿಕ ರಹ್ಮಾನ್ ಅವ‌ರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿರುವುದು ತನ್ನ ಗಮನಕ್ಕೆ ಬಂದಿತ್ತು ಎಂದು ಸೀತಾರಾಮ ಮಲೆಕುಡಿಯ ದೂರಿನಲ್ಲಿ ವಿವರಿಸಿದ್ದಾರೆ.

ಇದಾದ ಬಳಿಕ ಅದೇ ದಿನ ರಾತ್ರಿ 11 ಗಂಟೆ ಸುಮಾರಿಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಅವರು ಸುಮಾರು 50ಕ್ಕೂ ಅಧಿಕ ಬಜರಂಗ ದಳದ ಕಾರ್ಯಕರ್ತರೊಂದಿಗೆ ತನ್ನ ಮನೆಗೆ ಬಂದರು. ಈ ಸಂದರ್ಭದಲ್ಲಿ ಬಜರಂಗದಳದ ಕಾರ್ಯಕರ್ತರಾದ ರವಿ ಆಚಾರ್ಯ ಮತ್ತು ಯೋಗೀಶ್ ಪೂಜಾರಿ ಯಾನೆ ಮುನ್ನ ಎಂಬವರು ತನ್ನ ಜಾತಿ ನಿಂದನೆ ಮಾಡಿ, ಅವಹೇಳನಕರವಾಗಿ ಬೈದು, ನಾನುಟ್ಟ ಪಂಚೆಯನ್ನು ಎಳೆದಾಟಿ ನನ್ನನ್ನು ಅರೆನಗ್ನಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಎಸ್‌ಐ ಅವರು ಮೌನವಾಗಿದ್ದರು ಎಂದವರು ಆರೋಪಿಸಿದರು.

ಬಳಿಕ ಗುಂಪೊಂದು ತನ್ನ ಮೇಲೆ ಮುಗಿಬೀಳಲು ಬಂದಾಗ ಅವರು ತಡೆಯುವ ಪ್ರಯತ್ನ ಮಾಡಿದ್ದಾರೆ. ಅನಂತರ ಮನೆ ಒಳಗೆ ಬಂದ ಎಸ್‌ಐ ನನ್ನ ಪತ್ನಿಯನ್ನು ದೂಡಿಹಾಕಿ ಮನೆಯನ್ನು ಜಾಲಾಡಿದ್ದಾರೆ. ನನ್ನನ್ನು ಉಟ್ಟಬಟ್ಟೆ ಯಲ್ಲೇ ಠಾಣೆಗೆ ತಂದು ಸಂಘ ಪರಿವಾರದ ಆದೇಶದಂತೆ ಯಾವುದೇ ತಪ್ಪು ಮಾಡದ ತನ್ನ ಮೇಲೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಪರಿರಕ್ಷಣೆ ಅಧಿನಿಯಮ, ಪ್ರಾಣಿ ಹಿಂಸೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ನ್ಯಾಯಾಲಯ ತನಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಜು.28ರಂದು ಜಾಮೀನು ನೀಡಿದೆ ಎಂದು ವಿವರಿಸಿದ್ದಾರೆ.

ಗ್ರಾಮಾಂತರ ಠಾಣಾ ಎಸ್‌ಐ ಅವರು ತನ್ನ ಎದುರೇ ನನ್ನ ಜಾತಿನಿಂದನೆಗೈದು ಅರೆನಗ್ನಗೊಳಿಸಿ ಹಲ್ಲೆ ನಡೆಸಿದ ಬಜರಂಗ ದಳದ ಕಾರ್ಯಕರ್ತರ ವಿರುದ್ಧ ಯಾವುದೇ ಪ್ರಕರಣ ದಾಖಲಿಸದೇ ಕರ್ತವ್ಯ ಲೋಪವೆಸಗಿದ್ದು, ಯಾವುದೇ ತಪ್ಪು ಮಾಡದ ನನ್ನ ಮೇಲೆ ಜಾಮೀನು ರಹಿತ ಪ್ರಕರಣ ದಾಖಲಿಸಿ, ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವಂತೆ ಮಾಡಿದ್ದಾರೆ. ಇದರಿಂದ ತಾನು ಮಾನಸಿಕ ಹಾಗೂ ದೈಹಿಕವಾಗಿ ನೊಂದಿರುವುದಾಗಿ ಸೀತಾರಾಮ ಮಲೆಕುಡಿಯ ತಿಳಿಸಿದ್ದಾರೆ.

ನನ್ನ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಹಾಗೂ ಈ ಸಂದರ್ಭದಲ್ಲಿ ಆರೋಪಿಗಳನ್ನು ತಡೆಯದೇ ಕರ್ತವ್ಯಲೋಪವೆಸಗಿದ ಪೊಲೀಸ್ ಅಧಿಕಾರಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಐಜಿಪಿ ಹಾಗೂ ಎಸ್ಪಿ ಅವರಲ್ಲಿ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಮಿತಿ ಸದಸ್ಯರಾದ ಶೇಖರ ಲಾಯಿಲ ಹಾಗೂ ಜಯಾನಂದ ಪಿಲಿಕಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News