ದ.ಕ. ಜಿಲ್ಲೆಯಲ್ಲಿ 225 ಮಂದಿಗೆ ಕೊರೋನ ಸೋಂಕು; ನಾಲ್ವರು ಕೋವಿಡ್‌ಗೆ ಬಲಿ

Update: 2020-08-04 14:53 GMT

ಮಂಗಳೂರು, ಆ.4: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ 225 ಮಂದಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ. ಕೋವಿಡ್‌ನಿಂದಾಗಿ ಮಂಗಳೂರಿನ ನಾಲ್ವರು ಮೃತಪಟ್ಟಿದ್ದಾರೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೊರೋನ ಸೋಂಕಿನ ಅಬ್ಬರಕ್ಕೆ ಜನತೆ ತತ್ತರಿಸಿದ್ದು, ದಿನದಿಂದ ದಿನಕ್ಕೆ ಸೋಂಕಿತರು, ಮೃತರ ಸಂಖ್ಯೆಯಲ್ಲೂ ಭಾರೀ ಏರಿಕೆ ಕಂಡುಬರುತ್ತಿದೆ. ಮಂಗಳವಾರ ಮತ್ತೆ 225 ಮಂದಿಗೆ ಸೋಂಕು ತಗುಲಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 6,393ಕ್ಕೆ ಏರಿಕೆಯಾಗಿದೆ.

ಸೋಂಕಿತರ ಪೈಕಿ ‘ಸೋಂಕು ನಿಗೂಢ ಪ್ರಕರಣ’ಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ಇವರಿಗೆ ಯಾರಿಂದ ಸೋಂಕು ಹರಿಡಿದೆ ಎನ್ನುವುದು ತಿಳಿದುಬಂದಿಲ್ಲ. ಇಂತಹ ಪ್ರಕರಣಗಳು ನಿತ್ಯವೂ ಹೆಚ್ಚುತ್ತಲೇ ಸಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಜಿಲ್ಲೆಯಲ್ಲಿ ‘ಸೋಂಕು ನಿಗೂಢ ಪ್ರಕರಣ’-77 ಮಂದಿ, ಶೀತ-67, ತೀವ್ರ ಉಸಿರಾಟ ತೊಂದರೆ-20, ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 60, ವಿದೇಶದಿಂದ ಆಗಮಿಸಿದ್ದ ಓರ್ವನಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಸೋಂಕಿತರನ್ನು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

ಮಂಗಳೂರಿನಲ್ಲೇ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಮಂಗಳೂರಲ್ಲಿ ಇಲ್ಲಿವರೆಗೆ 4,541 ಮಂದಿಗೆ ಸೋಂಕು ತಗುಲಿದೆ. ಬೆಳ್ತಂಗಡಿ-29, ಬಂಟ್ವಾಳ-19, ಪುತ್ತೂರು-16, ಸುಳ್ಯ-4, ಮೂಡುಬಿದಿರೆ-1, ಹೊರಜಿಲ್ಲೆಯ ಒಂಬತ್ತು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

73 ಮಂದಿ ಗುಣಮುಖ: ಆರೋಗ್ಯಕರ ಬೆಳವಣಿಗೆಯಲ್ಲಿ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಗುಣಮುಖರಾಗುತ್ತಿದ್ದಾರೆ. ಜಿಲ್ಲೆಯ ವಿವಿಧ ಆಸ್ಪತ್ರೆಗಳು, ಆರೈಕೆ ಕೇಂದ್ರ, ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 73 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರೊಂದಿಗೆ ಒಟ್ಟು ಗುಣಮುಖರ ಸಂಖ್ಯೆ 2,927ಕ್ಕೇರಿದೆ. ಜಿಲ್ಲೆಯಲ್ಲಿ 3,061 ಸಕ್ರಿಯ ಪ್ರಕರಣಗಳಿವೆ.

ಕೋವಿಡ್‌ಗೆ ನಾಲ್ವರು ಬಲಿ: ದ.ಕ. ಜಿಲ್ಲೆಯಲ್ಲಿ ಕೋವಿಡ್‌ಗೆ ಬಲಿಯಾಗುತ್ತಿರುವವರ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ. ಮಂಗಳವಾರ ಮತ್ತೆ ಮಂಗಳೂರಿನ ನಾಲ್ವರು ಮೃತಪಟ್ಟಿದ್ದಾರೆ. ಮೃತರೆಲ್ಲ ವಿವಿಧ ರೋಗಗಳಿಂದ ಬಳಲುತ್ತಿದ್ದವರು. ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 180ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News