ಮಾತುಕತೆಗೆ ಸಿದ್ಧ, ಆದರೆ....: ಬಂಡಾಯ ಶಾಸಕರಿಗೆ ರಾಜಸ್ಥಾನ ಕಾಂಗ್ರೆಸ್ ನ ಷರತ್ತಿದು…

Update: 2020-08-04 14:56 GMT

ಹೊಸದಿಲ್ಲಿ, ಆ.4: ಸಚಿನ್ ಪೈಲಟ್ ನೇತೃತ್ವದ ಬಂಡಾಯ ಶಾಸಕರು ಬಿಜೆಪಿ ಸಖ್ಯ ತೊರೆದರೆ ಅವರೊಂದಿಗೆ ಮಾತುಕತೆಗೆ ಪಕ್ಷ ಸಿದ್ಧವಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ರಣದೀಪ್ ಸುರ್ಜೆವಾಲಾ ಹೇಳಿದ್ದಾರೆ.

ಈಗ ಹರ್ಯಾಣದಲ್ಲಿ ಮನೋಹರಲಾಲ್ ಖಟ್ಟರ್ ಸರಕಾರದ ಆತಿಥ್ಯದಲ್ಲಿ ಇರುವ ಅತೃಪ್ತ ಶಾಸಕರು ಬಿಜೆಪಿಯ ಸುರಕ್ಷಾ ಚಕ್ರದ ವ್ಯಾಪ್ತಿಯಿಂದ ಹೊರಬಂದರೆ ಅವರೊಂದಿಗೆ ಮಾತುಕತೆ ನಡೆಸಿ ಅವರ ಅಸಮಾಧಾನ ದೂರಗೊಳಿಸಲಾಗುವುದು ಎಂದು ಸುರ್ಜೆವಾಲಾ ಹೇಳಿದರು.

ಗುರುಗ್ರಾಮದಲ್ಲಿ ಅಮಾಯಕ ಮಕ್ಕಳ ಹತ್ಯೆ, ಸಾಮೂಹಿಕ ಅತ್ಯಾಚಾರ, ಜನರ ಮೇಲೆ ಹಲ್ಲೆಯಂತಹ ಘಟನೆ ನಿರಂತರ ನಡೆಯುತ್ತಿದ್ದರೂ ಪೊಲೀಸರ ಪತ್ತೆಯಿಲ್ಲ. ಆದರೆ 19 ಅತೃಪ್ತ ಶಾಸಕರ ಭದ್ರತೆಗೆ 1000 ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಸುರ್ಜೆವಾಲಾ ಟೀಕಿಸಿದರು. ಭಿನ್ನಮತೀಯ ಶಾಸಕರನ್ನು ಪಕ್ಷದ ಹೈಕಮಾಂಡ್ ಕ್ಷಮಿಸಿದರೆ ಅವರನ್ನು ಪಕ್ಷಕ್ಕೆ ಸ್ವಾಗತಿಸಲು ಸಿದ್ಧ ಎಂದು ಶನಿವಾರ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿಕೆ ನೀಡುವ ಮೂಲಕ ಬಂಡಾಯ ಶಾಸಕರ ವಿರುದ್ಧದ ಬಿಗು ಪಟ್ಟನ್ನು ಸಡಿಲಿಸುವ ಸೂಚನೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News