ಕಾರ್ಮಿಕ ಮಹಿಳೆಗೆ ಕಿರುಕುಳ, ಕೊಲೆಯತ್ನ: ಆರೋಪಿಗೆ ಐದು ವರ್ಷ ಶಿಕ್ಷೆ

Update: 2020-08-04 15:32 GMT

ಮಂಗಳೂರು, ಆ.4: ಕಾರ್ಮಿಕ ಮಹಿಳೆಗೆ ಮಾನಸಿಕ ಕಿರುಕುಳ ಹಾಗೂ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ಆರೋಪಿಗೆ ಐದು ವರ್ಷ ಶಿಕ್ಷೆ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.

ಪೆರ್ಮುದೆ ಕಿಟಕಿ ನಿವಾಸಿ ಸುನಿಲ್‌ ಕುಮಾರ್ (42) ಶಿಕ್ಷೆಗೊಳಗಾದ ಆರೋಪಿ.

ಪ್ರಕರಣ ವಿವರ:  ಸುನೀಲ್ ‌ಕುಮಾರ್‌ಗೆ ಕುಡಿತದ ಚಟವಿದ್ದು, ನೆರೆಹೊರೆಯವರೊಂದಿಗೆ ಗಲಾಟೆ ಮಾಡುತ್ತಿದ್ದ. ಅದರಂತೆ, ಮಂಗಳೂರು ನಗರದ ಹೊರವಲಯದ ಎಕ್ಕಾರು ಮೂಲದ ತನುಜಾ (45) ಎಂಬ ಮಹಿಳೆಯ ಜೊತೆಗೂ ಈತ ಪದೇ ಪದೇ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಮಹಿಳೆಯು ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಮೂರು ಬಾರಿ ದೂರು ನೀಡಿದ್ದರು.

ಇದಾದ ಬಳಿಕ 2019ರ ಫೆ. 28ರಂದು ಸಂಜೆ 5:30ಕ್ಕೆ ತನುಜಾ ಕೂಲಿ ಕೆಲಸದಿಂದ ಮನೆಗೆ ಬರುತ್ತಿದ್ದ ವೇಳೆ ಆರೋಪಿ ತಡೆದು ನಿಲ್ಲಿಸಿದ್ದಾನೆ. ಈ ವೇಳೆ ಮಹಿಳೆಗೆ ಈತ ಜೀವ ಬೆದರಿಕೆ ಹಾಕುವುದಲ್ಲದೆ, ದೊಣ್ಣೆಯಿಂದ ಹೊಡೆದು ಕೊಲೆಗೆ ಯತ್ನಿಸಿದ್ದ. ಇದು ಮಾತ್ರವಲ್ಲದೆ ಮಹಿಳೆಯ ಬಳಿಯಿದ್ದ ಮೊಬೈಲ್ ಕೂಡ ಸುಲಿಗೆ ಮಾಡಿದ್ದ ಎನ್ನುವ ಆರೋಪ ಈತನ ಮೇಲಿದೆ. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಅಕ್ರಮ ತಡೆ, ಮಾರಣಾಂತಿಕ ಹಲ್ಲೆ, ಸುಲಿಗೆ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡ ಬಜ್ಪೆ ಪೊಲೀಸ್ ಇನ್‌ಸ್ಪೆಕ್ಟರ್ ಪರಶಿವಮೂರ್ತಿ ಸಮಗ್ರ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ಬಗ್ಗೆ ಸಮಗ್ರ ವಿಚಾರಣೆ ನಡೆಸಿದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ನ್ಯಾಯಾಧೀಶ ಟಿ.ಪಿ. ರಾಮಲಿಂಗೇಗೌಡ ಆರೋಪ ಸಾಬೀತುಪಡಿಸಿ ತೀರ್ಪು ನೀಡಿದ್ದಾರೆ.

ಆರೋಪಿಗೆ ಐಪಿಸಿ ಸೆಕ್ಷನ್ 341 (ಅಕ್ರಮ ತಡೆ) ಆರೋಪದಲ್ಲಿ ಐದು ಸಾವಿರ ರೂ. ದಂಡ, 326 (ಮಾರಣಾಂತಿಕ ಹಲ್ಲೆ) ಆರೋಪದಲ್ಲಿ ನಾಲ್ಕು ವರ್ಷ ಜೈಲು ಮೂರು ಸಾವಿರ ರೂ. ದಂಡ, 307 (ಕೊಲೆಯತ್ನ) ಆರೋಪದಲ್ಲಿ ಐದು ವರ್ಷ ಶಿಕ್ಷೆ ಮೂರು ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಆರೋಪಿ ಪ್ರಕರಣ ನಡೆದ ಬಳಿಕ ನ್ಯಾಯಾಂಗ ಬಂಧನದಲ್ಲಿದ್ದು, ಶಿಕ್ಷೆ ಮುಂದುವರಿದಿದೆ.

ಪ್ರಕರಣಕ್ಕೆ ಸಂಬಂಧಿಸಿ ಒಂಬತ್ತು ಸಾಕ್ಷಿ ಹಾಗೂ 19 ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ದಂಡದ ಮೊತ್ತದಲ್ಲಿ ಐದು ಸಾವಿರ ರೂ. ಸಂತ್ರಸ್ತ ಮಹಿಳೆಗೆ ಪರಿಹಾರ ರೂಪದಲ್ಲಿ ನೀಡಬೇಕೆಂದು ನ್ಯಾಯಾಲಯವು ಆದೇಶದಲ್ಲಿ ಸೂಚಿಸಿದೆ.

ಸರಕಾರದ ಪರವಾಗಿ ಹರೀಶ್ಚಂದ್ರ ಉದ್ಯಾವರ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News