ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆ, ಬೈಂದೂರಿನಲ್ಲಿ ನೆರೆ

Update: 2020-08-04 15:50 GMT

ಉಡುಪಿ, ಆ.4: ಉಡುಪಿ ಜಿಲ್ಲೆಯಾದ್ಯಂತ ನಿನ್ನೆ ರಾತ್ರಿಯಿಂದ ಭಾರೀ ಮಳೆ ಸುರಿಯುತಿದ್ದು, ಇದರಿಂದ ಜಿಲ್ಲೆಯ ಹೆಚ್ಚಿನೆಲ್ಲಾ ನದಿಗಳು ಮತ್ತೆ ತುಂಬಿ ಹರಿಯ ತೊಡಗಿವೆ. ಬೈಂದೂರು ತಾಲೂಕಿನ ಸೌಪರ್ಣಿಕ ನದಿಯಿಂದಾಗಿ ನಾವುಂದ ಮತ್ತು ಬಡಾಕೆರೆಗಳಲ್ಲಿ ನೆರೆ ಉಂಟಾಗಿದೆ.

ಆದರೆ ಜಿಲ್ಲೆಯ ಯಾವುದೇ ಕಡೆಯಿಂದ ಮಳೆಯಿಂದ ಅಪಾಯ ಉಂಟಾಗಿರುವ ವರದಿ ಬಂದಿಲ್ಲ. ಇಂದು ಮಳೆಯೊಂದಿಗೆ ಆಗಾಗ ಭಾರೀ ಗಾಳಿಯೂ ಬೀಸುತ್ತಿದ್ದು, ಜಿಲ್ಲೆಯ ನಾನಾ ಕಡೆದಗಳಲ್ಲಿ 20ರಿಂದ 30ರಷ್ಟು ಮನೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ಇವುಗಳಲ್ಲಿ ಹೆಚ್ಚಿನ ಮನೆಗಳ ಮೇಲೆ ತೆಂಗಿನ ಮರ, ಅಡಿಕೆ ಮರ ಹಾಗೂ ಇತರ ಮರಗಳು ಉರುಳಿ ಹಾನಿ ಸಂಭವಿಸಿದೆ.

ಸೌರ್ಪಣಿಕ ನದಿಯಲ್ಲಿ ಬಂದಿರುವ ನೆರೆಯಿಂದ ನಾವುಂದ ಮತ್ತು ಬಡಾಕೆರೆಗಳಲ್ಲಿ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಇದರಿಂದ ವಾಹನ ಹಾಗೂ ಜನರ ಸಂಚಾರಕ್ಕೆ ಅಡಚಣೆಯಾಗಿದೆ. ಆದರೆ ಮನೆಗಳಿಗೆ ಇದರಿಂದ ಯಾವುದೇ ಸಮಸ್ಯೆ ಉಂಟಾದ ಬಗ್ಗೆ ವರದಿ ಬಂದಿಲ್ಲ. ಬೈಂದೂರು ತಾಲೂಕಿನಲ್ಲಿ ಇಂದು ಎಂಟಕ್ಕೂ ಹೆಚ್ಚು ಮನೆಗಳ ಮೇಲೆ ಮರಗಳು ಉರುಳಿ ಲಕ್ಷಾಂತರ ರೂ.ನಷ್ಟ ಉಂಟಾಗಿದೆ ಎಂದು ಬೈಂದೂರಿನ ತಹಶೀಲ್ದಾರ್ ಬಸಪ್ಪ ತಿಳಿಸಿದ್ದಾರೆ.

ಕಮಲಶಿಲೆಯಲ್ಲಿ ಗರ್ಭಗುಡಿಗೆ ನೀರು

ಬೈಂದೂರು ತಾಲೂಕಿನಾದ್ಯಂತ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮಂಗಳವಾರ ಕುಬ್ಜಾ ನದಿ ತುಂಬಿ ಹರಿಯುತಿದ್ದು, ನದಿ ನೀರು ಪ್ರತಿವರ್ಷದಂತೆ ಇಂದು ಕಮಲಶಿಲೆಯ ಶ್ರೀಬ್ರಾಹ್ಮೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸಿತು.

ಕುಬ್ಜಾ ನದಿ ನೀರು ಗರ್ಭಗುಡಿಯಲ್ಲಿದ್ದ ದೇವಿಯ ಪಾದವನ್ನು ತೊಯಿಸಿದ್ದರಿಂದ ಅರ್ಚಕರು ವಿಶೇಷ ಪೂಜೆ ನೆರವೇರಿಸಿದರು. ಕುಬ್ಜಾ ನದಿ ನೀರು ಗರ್ಭಗುಡಿ ಪ್ರವೇಶಿಸಿದಾಗ ಆ ನೀರಿನಲ್ಲಿ ಸ್ನಾನ ಮಾಡಿದರೆ ಪುಣ್ಯ ಸಿಗುತ್ತದೆ ಎಂಬ ಊರವರ ನಂಬಿಕೆಯಿಂದ ಸಾಕಷ್ಟು ಮಂದಿ ಈ ನೀರಿನಲ್ಲಿ ಮುಳುಗಿ ಸ್ನಾನ ಮಾಡಿದರು. ಆದರೆ ಕೊರೋನದ ಕಾರಣದಿಂದ ಈ ಬಾರಿ ಸೇರಿದ ಜನರ ಸಂಖ್ಯೆ ತೀರಾ ಕಡಿಮೆ ಇತ್ತು ಎಂದು ದೇವಸ್ಥಾನದ ಅರ್ಚಕರು ತಿಳಿಸಿದರು.

ಬ್ರಹ್ಮಾವರ ತಾಲೂಕಿನಲ್ಲಿ 8-10 ಮನೆಗಳಿಗೆ ಹಾಗೂ ಕಾರ್ಕಳ ತಾಲೂಕಿನ ಇನ್ನಾ ಮತ್ತು ಹಿರ್ಗಾನ ಗ್ರಾಮದ ಎರಡು ಮನೆಗಳಿಗೆ ಗಾಳಿ-ಮಳೆಯಿಂದ ಹಾನಿಯಾಗಿರುವ ವರದಿ ಬಂದಿದೆ ಎಂದು ತಾಲೂಕು ಕಚೇರಿಯ ಮೂಲಗಳು ತಿಳಿಸಿವೆ.

ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 68 ಮಿ.ಮೀ. ಮಳೆಯಾಗಿದೆ. ಉಡುಪಿಯಲ್ಲಿ 50ಮಿ.ಮೀ., ಕುಂದಾಪುರದಲ್ಲಿ 73 ಹಾಗೂ ಕಾರ್ಕಳದಲ್ಲಿ 81 ಮಿ.ಮೀ. ಮಳೆಯಾಗಿದೆ ಎಂದು ವರದಿ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News