ಬ್ರಹ್ಮಾವರ: ಒಂದೇ ಕುಟುಂಬದ ಐವರಿಗೆ ಕೊರೋನ ಪಾಸಿಟಿವ್

Update: 2020-08-04 16:01 GMT

ಉಡುಪಿ, ಆ.4: ಬ್ರಹ್ಮಾವರ ತಾಲೂಕು ಹಂದಾಡಿ ಗ್ರಾಪಂ ವ್ಯಾಪ್ತಿಯ ಕುಮ್ರಗೋಡು ಪಡುಬೆಟ್ಟಿನ ಒಂದು ಕುಟುಂಬದ ಐವರಿಗೆ ಇಂದು ಕೋವಿಡ್- 19 ಪಾಸಿಟಿವ್ ಕಾಣಿಸಿಕೊಂಡಿದೆ ಎಂದು ಬ್ರಹ್ಮಾವರದ ತಹಶೀಲ್ದಾರ್ ಕಿರಣ್ ಗೋರಯ್ಯ ತಿಳಿಸಿದ್ದಾರೆ.

ತಂದೆ-ತಾಯಿ ಹಾಗೂ ಮಕ್ಕಳಲ್ಲಿ ಕೊರೋನ ಸೋಂಕು ಕಾಣಿಸಿಕೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ, ಮನೆಯೊಂದಿಗೆ ಅಕ್ಕಪಕ್ಕದ ನಾಲ್ಕು ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ ಎಂದವರು ತಿಳಿಸಿದ್ದಾರೆ.

ಅಲ್ಲದೇ ಬ್ರಹ್ಮಾವರ ಹೋಬಳಿಯಲ್ಲಿ ಇಂದು ಪೆಜಮಂಗೂರು ಗ್ರಾಮ ಆಸುಪಾಸಿನ ನಾಲ್ವರಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ. ಅಲ್ಲಿನ ಆರೂವರೆ ವರ್ಷ ಪ್ರಾಯದ ಮಗುವಿನಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಎರಡು ಮನೆ ಹಾಗೂ ಅಂಗಡಿಯೊಂದನ್ನು ಸೀಲ್‌ಡೌನ್ ಮಾಡಲಾಗಿದೆ.

ಪೆಜಮಂಗೂರಿನಲ್ಲೆ 70 ವರ್ಷ ಪ್ರಾಯದ ವೃದ್ಧರಲ್ಲೂ ಪಾಸಿಟಿವ್ ಕಂಡುಬಂದಿದ್ದು, ಅವರ ಸಂಪರ್ಕ ಮೂಲ ಗೊತ್ತಾಗಿಲ್ಲ. ಅವರು ಮನೆಯಿಂದ ಎಲ್ಲೂ ಹೋಗಿಲ್ಲ ಎಂದು ಹೇಳಲಾಗುತ್ತಿದೆ. ಇಲ್ಲಿ ಮೂರು ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ.

ಸೂರಾಲಿನ 65 ವರ್ಷದ ವೃದ್ಧರು ಹಾಗೂ ಪೆಜಮಂಗೂರಿನ 14 ವರ್ಷದ ಬಾಲಕ ಸೋಂಕಿಗೆ ಪಾಸಿಟಿವ್ ಆಗಿದ್ದು, ಇಲ್ಲಿ ತಲಾ ಒಂದು ಮನೆ ಯನ್ನು ಸೀಲ್‌ಡೌನ್ ಮಾಡಲಾಗಿದೆ. ಇದರೊಂದಿಗೆ ಹೇರೂರು ಗ್ರಾಮದಲ್ಲಿ ಇಬ್ಬರಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ. 53 ವರ್ಷ ಪ್ರಾಯ ಹಾಗೂ 60 ವರ್ಷದ ಹಿರಿಯರಲ್ಲಿ ಇದು ಕಾಣಿಸಿಕೊಂಡಿದ್ದು ಕ್ರಮವಾಗಿ ಎರಡು ಮತ್ತು ಮೂರು ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ.

ಬ್ರಹ್ಮಾವರ ತಾಲೂಕು ಕೋಟ ಹೋಬಳಿಯಲ್ಲಿ ಇಂದು ಒಟ್ಟು ಆರು ಮಂದಿಯಲ್ಲಿ ಪಾಸಿಟಿವ್ ಕಂಡುಬಂದಿದೆ. ಪಾಂಡೇಶ್ವರ-1, ಮಂದಾರ್ತಿ-2, ಆವರ್ಸೆ-1, ಹಿಲಿಯಾಣ-2ರಲ್ಲಿ ಇಂದು ಕಂಡುಬಂದಿದ್ದು, ಅಕ್ಕಪಕ್ಕದ ಮನೆಗಳನ್ನು ಸಹ ಕಂಟೈನ್‌ಮೆಂಟ್ ವಲಯಕ್ಕೆ ಸೇರಿಸಲಾಗಿದೆ ಎಂದು ಕೋಟದ ಆರ್‌ಐ ರಾಜು ತಿಳಿಸಿದ್ದಾರೆ.

ಬೈಂದೂರಿನಲ್ಲಿ ಇಂದು ಕಿರಿಮಂಜೇಶ್ವರದ ಒಬ್ಬರಲ್ಲಿ ಮಾತ್ರ ಪಾಸಿಟಿವ್ ಕಂಡುಬಂದಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News