×
Ad

ಬಂಟ್ವಾಳದಲ್ಲಿ ಭಾರೀ ಗಾಳಿ, ಮಳೆ : ಗುಡ್ಡ ಕುಸಿತ, ಧರೆಗುರುಳಿದ ಮರ-ವಿದ್ಯುತ್ ಕಂಬಗಳು

Update: 2020-08-04 22:15 IST

ಬಂಟ್ವಾಳ, ಆ.4: ಭಾರೀ ಗಾಳಿ ಹಾಗೂ ಧಾರಾಕಾರ ಮಳೆಗೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ಅಲ್ಲಲ್ಲಿ ಸಣ್ಣ ಪುಟ್ಟ ಅಪಘಾತಗಳು, ಗುಡ್ಡ ಕುಸಿತ, ಮರ ಮತ್ತು ವಿದ್ಯುತ್ ಕಂಬಗಳು ಧರೆಗುರುಳಿದ ಘಟನೆಗಳು ಮಂಗಳವಾರ ಸಂಭವಿಸಿವೆ. ನೇತ್ರಾವತಿ ನದಿ ನೀರಿನ ಮಟ್ಟವೂ ಹೆಚ್ಚಿದ್ದು ನದಿ ತುಂಬಿ ಹರಿಯುತ್ತಿದೆ. 

ಮೇಲ್ಕಾರ್ ಸಮೀಪದ ಬೋಳಂಗಡಿಯಲ್ಲಿ ಲಾರಿ ಉರುಳಿದ ಬಳಿಕ ಅದನ್ನು ಕ್ರೇನ್ ನಲ್ಲಿ ಎತ್ತುವ ದೃಶ್ಯ ವೈರಲ್ ಆದವು. ಇನ್ನು ಮಾಣಿ ಸಮೀಪ ಸೂರಿಕುಮೇರು ಎಂಬಲ್ಲಿ ಕಾರಿನ ಮೇಲೆ ಮರ ಬಿದ್ದು ಕಾರು ಜಖಂಗೊಂಡಿತು ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 
ಮೇಲ್ಕಾರ್ ಸಮೀಪ ಬೋಳಂಗಡಿ ಎಂಬಲ್ಲಿ ಸಂಜೆ ವೇಳೆ ಲಾರಿಯೊಂದು ಹೆದ್ದಾರಿಯಲ್ಲಿ ಅಡ್ಡಲಾಗಿ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಯಿತು. ಬಿ.ಸಿ.ರೋಡ್ ಕಡೆಯಿಂದ ಮಾಣಿ ಕಡೆಗೆ ಮರದ ತುಂಡುಗಳನ್ನು ಹೇರಿಕೊಂಡು ಬರುತ್ತಿದ್ದ ಲಾರಿ ಮೇಲ್ಕಾರ್ ಸಮೀಪ ಬೋಳಂಗಡಿ ತಿರುವಿಗೆ ಬರುತ್ತಿದ್ದಂತೆ ಮಗುಚಿಬಿದ್ದಿದೆ. ಬಳಿಕ ಕ್ರೇನ್ ಬಳಸಿ ಲಾರಿಯನ್ನು ಬದಿಗೆ ಸರಿಸಲಾಯಿತು.

ಸೂರಿಕುಮೇರು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿದ್ದ ಪುರಾತನ ಆಲದ ಮರವೊಂದು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಾರಿನ ಮೇಲೆ ಬಿದ್ದ ಪರಿಣಾಮ ಕಾರು ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಚಾರ ವ್ಯತ್ಯಯ ಉಂಟಾಯಿತು.

ನಿರಂತರವಾಗಿ ಸುರಿಯುವ ಮಳೆಗೆ ಗುಡ್ಡ ಜರಿದು ನಿರ್ಮಾಣ ಹಂತದಲ್ಲಿರುವ ಅಲ್ಪಸಂಖ್ಯಾತ ಇಲಾಖೆ ಹಾಸ್ಟೆಲ್ ಕಾಮಗಾರಿ ಪಿಲ್ಲರ್ ಗಳು ಮಣ್ಣಿನೊಳಗೆ ಸಿಲುಕಿರುವ ಘಟನೆ ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲಾಯಿ ಎಂಬಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ.

ನೇತ್ರಾವತಿ ನದಿ ನೀರಿನ ಮಟ್ಟ ಮಂಗಳವಾರ ಸಂಜೆ 6 ಮೀಟರ್ ಗೆ ಏರಿಕೆಯಾಗಿದೆ. ತಾಲೂಕಿನಲ್ಲಿ ಸೋಮವಾರ ಬೆಳಗ್ಗೆ 8ರಿಂದ ಮಂಗಳವಾರ ಬೆಳಗ್ಗೆ 8ರ 24 ಅವಧಿಯಲ್ಲಿ 60.4 ಮಿಲಿ ಮೀಟರ್ ಮಳೆ ದಾಖಲಾಗಿದೆ. ಹಾಗೆಯೇ ತಾಲೂಕಿನ ವಿಟ್ಲದ ಕೊಳ್ನಾಡು ಗ್ರಾಮದ ರಾಜ್ಯ ಹೆದ್ದಾರಿ 101 ಹಾದು ಹೋಗುವ ಕರೈ ಎಂಬಲ್ಲಿ ಇಂದು ಮುಂಜಾನೆ ಬೀಸಿದ ಬಾರೀ ಗಾಳಿ ಮಳೆಗೆ ಹಲವಾರು ಬೃಹತ್ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು ಹಲವು  ಕಂಬಗಳು ಹಾಗೂ ಮರಗಳು ರಾಜ್ಯ ಹೆದ್ದಾರಿಗೆ ಉರುಳಿದ ಪರಿಣಾಮ  ಹೆದ್ದಾರಿಯಲ್ಲಿ ಸಂಚಾರಕ್ಕೆ ತೊಡಕಾಗಿದೆ.

ಸೋಮವಾರ ಸಂಜೆಯಿಂದಲೇ ಭಾರೀ ಮಳೆ ಗಾಳಿ ಉಂಟಾಗಿತ್ತು. ಇದರಿಂದ ರಸ್ತೆ ಬದಿಯಲ್ಲಿರುವ ಮರಗಳು ವಿದ್ಯುತ್ ತಂತಿಯ ಮೇಲೆ ಉರುಳಿ ಬಿದ್ದಿದೆ. ಇದರಿಂದ ಏಳು ವಿದ್ಯುತ್  ಕಂಬಗಳು ಧರೆಶಾಯಿಯಾಗಿದೆ. ಇದರಿಂದ ವಿಟ್ಲ-ಸಾಲೆತ್ತೂರು ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ವಿಟ್ಲದಿಂದ ಸಾಲೆತ್ತೂರು, ಮುಡಿಪು, ದೇರಳಕಟ್ಟೆ ಕಡೆಗಳಿಗೆ ತೆರಳುವ ವಾಹನಗಳು ಸಾಲುಗಟ್ಟಿ ನಿಂತಿದೆ. 

ಕೂಡಲೇ ಕಾರ್ಯಪ್ರವೃತ್ತರಾದ ಊರಿನ ನಾಗರಿಕರು, ಮರ ತುಂಡು ಮಾಡುವ ಯಂತ್ರಗಳೊಂದಿಗೆ ಊರಿನ ಯುವಕರು ಸತತ 1 ಗಂಟೆಗಳ ಪರಿಶ್ರಮದಿಂದ ಕಾರ್ಯಚರಣೆ ಯಶಸ್ವಿಯಾಗಿ ಪೂರ್ತಿಗೊಂಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News