ಕೊರೋನ ವಿರುದ್ಧ ಅಮೆರಿಕದ ಸಾಧನೆ ‘ಅತ್ಯುತ್ತಮ’

Update: 2020-08-04 17:26 GMT

ವಾಶಿಂಗ್ಟನ್, ಆ. 4: ದೊಡ್ಡ ದೇಶಗಳಿಗೆ ಹೋಲಿಸಿದರೆ, ಕೋವಿಡ್-19 ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಅಮೆರಿಕದ ಸಾಧನೆ ‘ಅತ್ಯುತ್ತಮ’ವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅದೇ ವೇಳೆ, ಈ ಕಾಯಿಲೆಯ ವಿರುದ್ಧದ ಹೋರಾಟದಲ್ಲಿ ಭಾರತವು ‘ಅಗಾಧ ಸಮಸ್ಯೆ’ಯನ್ನು ಎದುರಿಸುತ್ತಿದೆ ಹಾಗೂ ಚೀನಾದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿ ಕೊರೋನ ಸೋಂಕು ಪ್ರಕರಣಗಳ ಸಂಖ್ಯೆ ಮಂಗಳವಾರ 18,55,745ಕ್ಕೆ ಏರಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 52,050 ಮಂದಿ ಸೋಂಕಿಗೆ ಒಳಗಾಗಿದ್ದಾರೆ.

ಚೀನಾದಲ್ಲಿ ಮಂಗಳವಾರ ಹೊಸದಾಗಿ 36 ಸೋಂಕು ಪ್ರಕರಣಗಳು ವರದಿಯಾಗಿವೆ. ಹಿಂದಿನ ದಿನದ 43ಕ್ಕೆ ಹೋಲಿಸಿದರೆ ಇದು ಕಡಿಮೆಯಾಗಿದೆ.

‘‘ಈ ವಿಷಯದಲ್ಲಿ ನಮ್ಮ ಸಾಧನೆ ಚೆನ್ನಾಗಿದೆ. ಯಾವುದೇ ದೇಶಕ್ಕಿಂತ ನಮ್ಮ ಸಾಧನೆ ಕಡಿಮೆಯಿಲ್ಲ. ವಿಶೇಷವಾಗಿ ಇತರ ದೇಶಗಳನ್ನು ನೋಡಿದರೆ ಇದು ಸುಲಭವಾಗಿ ನಮ್ಮ ಗಮನಕ್ಕೆ ಬರುತ್ತದೆ’’ ಎಂದು ಸೋಮವಾರ ಶ್ವೇತಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್ ಹೇಳಿದರು.

‘‘ಭಾರತ ಮತ್ತು ಚೀನಾವನ್ನು ಹೊರತುಪಡಿಸಿ, ಬೇರೆ ದೇಶಗಳಿಗಿಂತ ನಮ್ಮ ದೇಶ ತುಂಬಾ ದೊಡ್ಡದು. ಚೀನಾದಲ್ಲಿ ಈಗ ಹೊಸದಾಗಿ ಭಾರೀ ಪ್ರಮಾಣದಲ್ಲಿ ಸೋಂಕುಗಳು ಕಾಣಿಸಿಕೊಳ್ಳುತ್ತಿವೆ ಹಾಗೂ ಭಾರತವು ಅಗಾಧ ಸಮಸ್ಯೆಗಳನ್ನು ಎದುರಿಸುತ್ತಿದೆ. ಇತರ ದೇಶಗಳೂ ಸಮಸ್ಯೆಗಳಲ್ಲಿ ಸಿಲುಕಿವೆ’’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News