ಭೀಮಾ-ಕೋರೆಗಾಂವ್ ಪ್ರಕರಣ: ಪ್ರೊ.ಹನಿಬಾಬು ಎನ್‌ಐಎ ಕಸ್ಟಡಿ ಅವಧಿ ಆ.7ರವರೆಗೆ ವಿಸ್ತರಣೆ

Update: 2020-08-04 18:13 GMT

ಮುಂಬೈ, ಆ.4: ಭೀಮಾ-ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ದಿಲ್ಲಿ ವಿವಿಯ ಪ್ರೊ.ಹನಿಬಾಬು ಅವರ ಎನ್‌‌ಐಎ ಕಸ್ಟಡಿ ಅವಧಿಯನ್ನು ಮಂಗಳವಾರ ಇಲ್ಲಿಯ ವಿಶೇಷ ನ್ಯಾಯಾಲಯವು ಆ.7ರವರೆಗೆ ವಿಸ್ತರಿಸಿದೆ.

ದಿಲ್ಲಿ ವಿವಿಯ ಇಂಗ್ಲೀಷ್ ವಿಭಾಗದಲ್ಲಿ ಸಹಾಯಕ ಬೋಧಕರಾಗಿರುವ ಹನಿಬಾಬು(54) ಅವರನ್ನು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಜು.28ರಂದು ಬಂಧಿಸಲಾಗಿತ್ತು. ಅವರ ಎನ್‌‌ಐಎ ಕಸ್ಟಡಿ ಅವಧಿಯು ಮಂಗಳವಾರ ಅಂತ್ಯಗೊಂಡ ಹಿನ್ನೆಲೆಯಲ್ಲಿ ಅವರನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿತ್ತು.

ಬಾಬು ಅವರು ಸಿಪಿಐ (ಮಾವೋವಾದಿ) ಜೊತೆಗೆ ನಂಟು ಹೊಂದಿದ್ದರು. ಅವರ ಇ-ಮೇಲ್ ಖಾತೆಯಿಂದ ಸುಮಾರು 1.26 ಲಕ್ಷ ಮೇಲ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು,ಅವುಗಳನ್ನು ಪರಿಶೀಲಿಸುವ ಅಗತ್ಯವಿದೆ. ಪ್ರಕರಣದ ಇತರ ಆರೋಪಿಗಳು,ಶಂಕಿತರು ಮತ್ತು ಸಿಪಿಐ (ಮಾವೋವಾದಿ) ಬೆಂಬಲಿಗರೊಂದಿಗೆ ಸಂವಹನ ನಡೆಸಲು ಅವರು ಬಳಸಿದ್ದ ಸಾಮಾಜಿಕ ಮಾಧ್ಯಮ ಖಾತೆಗಳನ್ನೂ ಪರಿಶೀಲಿಸಬೇಕಿದೆ. ಹೀಗಾಗಿ ಅವರ ಕಸ್ಟಡಿ ಅವಧಿಯನ್ನು ವಿಸ್ತರಿಸಬೇಕು ಎಂಬ ಎನ್‌‌ಐಎ ಮನವಿಯನ್ನು ಪುರಸ್ಕರಿಸಿದ ನ್ಯಾ.ಆರ್.ಆರ್.ಭೋಸಲೆ ಅವರು ಕಸ್ಟಡಿ ಅವಧಿಯನ್ನು ಇನ್ನೂ ಮೂರು ದಿನಗಳ ಕಾಲ ವಿಸ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News