​ಕೋವಿಡ್-19: ಹೊಸ ಪ್ರಕರಣ, ಸಾವು ಎರಡಲ್ಲೂ ಭಾರತ ವರ್ಲ್ಡ್ ನಂಬರ್ ವನ್

Update: 2020-08-05 03:42 GMT

ಹೊಸದಿಲ್ಲಿ : ಸತತ ಎರಡನೇ ದಿನ ಕೂಡಾ ಭಾರತ ವಿಶ್ವದಲ್ಲೇ ಗರಿಷ್ಠ ಸಂಖ್ಯೆಯ ಹೊಸ ಕೊರೋನ ವೈರಸ್ ಸೋಂಕು ಪ್ರಕರಣಗಳನ್ನು ಸೋಮವಾರ ದಾಖಲಿಸಿದೆ. ಅಂತೆಯೇ ಸೋಮವಾರ ಒಂದೇ ದಿನ ಗರಿಷ್ಠ ಸಂಖ್ಯೆಯ ಸೋಂಕಿತರು ಭಾರತದಲ್ಲಿ ಮೃತಪಟ್ಟಿದ್ದಾರೆ.

ಸೋಮವಾರ 814 ಸೋಂಕಿತರು ಭಾರತದಲ್ಲಿ ಮೃತಪಟ್ಟಿದ್ದರೆ, ಬ್ರೆಝಿಲ್ (572) ಮತ್ತು ಅಮೆರಿಕ (568) ವಿಶ್ವದಲ್ಲಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

ಭಾರತದಲ್ಲಿ ಸೋಮವಾರ 49,134 ಹೊಸ ಪ್ರಕರಣಗಳು ವರದಿಯಾಗಿದ್ದರೆ, ಅಮೆರಿಕದಲ್ಲಿ 48,622 ಹಾಗೂ ಬ್ರೆಝಿಲ್‌ನಲ್ಲಿ 17,988 ಪ್ರಕರಣಗಳು ದೃಢಪಟ್ಟಿವೆ ಎಂದು ವರ್ಲ್ಡೋಮೀಟರ್.ಇನ್ಫೋ ವೆಬ್‌ಸೈಟ್ ಕಲೆ ಹಾಕಿದ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಆದಾಗ್ಯೂ ಮಂಗಳವಾರ, ವಾರದಲ್ಲಿ ಇದೇ ಮೊದಲ ಬಾರಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 874ರಷ್ಟು ಕಡಿಮೆಯಾಗಿದೆ ಎನ್ನುವುದು ರಾಜ್ಯಗಳಿಂದ ಸಂಗ್ರಹಿಸಿದ ಅಂಕಿ ಅಂಶಗಳಿಂದ ತಿಳಿದುಬಂದಿದೆ. ಸಕ್ರಿಯ ಪ್ರಕರಣಗಳು ಕಡಿಯೆಯಾಗಿವೆ ಎಂದರೆ, ಹೊಸ ಸೋಂಕು ಪ್ರಕರಣಗಳ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆ ಅಧಿಕ. ಆದರೆ ಈ ಪ್ರವೃತ್ತಿ ಮುಂದುವರಿಯಲಿದೆಯೇ ಎಂದು ಕಾದು ನೋಡಬೇಕಾಗಿದೆ.

ಮಂಗಳವಾರ ದೇಶದಲ್ಲಿ ಮತ್ತೆ 50 ಸಾವಿರಕ್ಕೂ ಅಧಿಕ (51,051) ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 19,04,719ಕ್ಕೇರಿದೆ. ಗುಣಮುಖರಾದವರ ಸಂಖ್ಯೆ 51,083 ಆಗಿದ್ದು, ಒಟ್ಟು 12.8 ಲಕ್ಷ ಮಂದಿ ಸೋಂಕುಮುಕ್ತರಾಗಿದ್ದಾರೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 5,86,348. ಮಂಗಳವಾರ ಸೋಂಕಿಗೆ 842 ಮಂದಿ ಬಲಿಯಾಗಿದ್ದಾರೆ. ಸತತ ಎರಡನೇ ದಿನ ಮೃತರ ಸಂಖ್ಯೆ 800ಕ್ಕಿಂತ ಅಧಿಕವಾಗಿದೆ. ಇದುವರೆಗಿನ ಗರಿಷ್ಠ ಸಾವು (848) ಶನಿವಾರ ಸಂಭವಿಸಿತ್ತು.

ಈ ಮಧ್ಯೆ ಒಂದು ಲಕ್ಷಕ್ಕಿಂತ ಅಧಿಕ ಪ್ರಕರಣಗಳು ವರದಿಯಾದ ಆರನೇ ರಾಜ್ಯವಾಗಿ ಉತ್ತರ ಪ್ರದೇಶ ಸೇರ್ಪಡೆಯಾಗಿದೆ. ಆಂಧ್ರಪ್ರದೇಶದಲ್ಲಿ ದೇಶದಲ್ಲೇ ಗರಿಷ್ಠ (9,747) ಪ್ರಕರಣಗಳು ದಾಖಲಾಗಿದ್ದು, ಮಹಾರಾಷ್ಟ್ರ (7,760) ಎರಡನೇ ಸ್ತಾನದಲ್ಲಿದೆ. ಕರ್ನಾಟಕ (6,259), ಬಂಗಾಳ (2,752) ಮತ್ತು ಅಸ್ಸಾಂ (2,371) ರಾಜ್ಯಗಳಲ್ಲಿ ಒಂದು ದಿನದ ಗರಿಷ್ಠ ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News