ಜಾಮಿಯಾ ಮಿಲ್ಲಿಯಾ ಅಕಾಡಮಿಯ 30 ಮಂದಿ ಯುಪಿಎಸ್‌ಸಿ ತೇರ್ಗಡೆ

Update: 2020-08-05 04:25 GMT

ಹೊಸದಿಲ್ಲಿ : ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ರೆಸಿಡೆನ್ಷಿಯಲ್ ಕೋಚಿಂಗ್ ಅಕಾಡಮಿ (ಆರ್‌ಸಿಎ)ಯಲ್ಲಿ ತರಬೇತಿ ಪಡೆದ 30 ಅಭ್ಯರ್ಥಿಗಳು ಈ ಬಾರಿಯ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಆರ್‌ಸಿಎಯಲ್ಲಿ ವಾಸ್ತವ್ಯವಿದ್ದು ತರಬೇತಿ ಪಡೆದ 25 ಮಂದಿ ಹಾಗೂ ಕೇಂದ್ರದ ಅಣಕು ಸಂದರ್ಶನ ಕಾರ್ಯಕ್ರಮದಲ್ಲಿ ತರಬೇತಿ ಪಡೆದ ಐದು ಮಂದಿ ತೇರ್ಗಡೆಯಾಗಿದ್ದಾರೆ. ಇದು ದೇಶದ ಯಾವುದೇ ತರಬೇತಿ ಕೇಂದ್ರದಿಂದ ಆಯ್ಕೆಯಾದ ಗರಿಷ್ಠ ಸಂಖ್ಯೆಯಾಗಿದೆ ಎಂದು ಜಾಮಿಯಾ ಮಿಲ್ಲಿಯಾ ಅಧಿಕಾರಿ ವಿವರಿಸಿದ್ದಾರೆ.

ರುಚಿ ಬಿಂದಾನ್ 39ನೇ ರ್ಯಾಂಕ್ ಪಡೆದಿದ್ದು, ಈ ಬಾರಿ ಆರ್‌ಸಿಎನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಯುಪಿಎಸ್ಸಿಗೆ ಆಯ್ಕೆಯಾದ 30 ಮಂದಿಯ ಪೈಕಿ ಆರು ಮಂದಿ ಮಹಿಳೆಯರು.

ನಾಗರಿಕ ಸೇವಾ ಪರೀಕ್ಷಾ ಆಕಾಂಕ್ಷಿಗಳಿಗೆ ಆರ್‌ಸಿಎ ಉಚಿತವಾಗಿ ತರಬೇತಿ ನೀಡುತ್ತದೆ. ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಮಾತ್ರ ಅವಕಾಶ ಇರುತ್ತದೆ. ಮಹಿಳಾ ಅಭ್ಯರ್ಥಿಗಳು ಕೂಡಾ ತರಬೇತಿಗೆ ಅರ್ಹರಾಗಿದ್ದು, ಅವರಿಗೂ ಜಾಮಿಯಾ ಉಚಿತ ಕೋಚಿಂಗ್ ಮತ್ತು ಹಾಸ್ಟೆಲ್ ಸೌಲಭ್ಯ ಕಲ್ಪಿಸುತ್ತದೆ.

ಅಕಾಡಮಿಯಲ್ಲಿ ತರಬೇತಿ ಪಡೆದ 60 ಮಂದಿ 2019ರ ಪರೀಕ್ಷೆಯಲ್ಲಿ ಸಂದರ್ಶನಕ್ಕೆ ಆಯ್ಕೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News