ರಾಮಜನ್ಮ ಭೂಮಿಗೆ ಭೇಟಿ ನೀಡುತ್ತಿರುವ ಮೊದಲ ಪ್ರಧಾನಿ ಮೋದಿ: ಉ.ಪ್ರ.ಸರಕಾರ ಹೇಳಿಕೆ

Update: 2020-08-05 05:07 GMT

ಹೊಸದಿಲ್ಲಿ, ಆ.5: ಇದೇ ಮೊದಲ ಬಾರಿ ದೇಶದ ಪ್ರಧಾನಿಯೊಬ್ಬರು ಅಯೋಧ್ಯೆಯ ರಾಮಜನ್ಮ ಭೂಮಿಗೆ ಭೇಟಿ ನೀಡುತ್ತಿದ್ದಾರೆ ಎಂದು ಉತ್ತರಪ್ರದೇಶ ಸರಕಾರ ಹೇಳಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ,ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಸಹಿತ 50 ಗಣ್ಯರು ಇಂದು ಅಯೋಧ್ಯೆಯಲ್ಲಿ ರಾಮಮಂದಿರದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ, ಪ್ರಧಾನಿ ಮೋದಿ ಇಂದು ಸುಮಾರು 29 ವರ್ಷಗಳ ಬಳಿಕ ಅಯೋಧ್ಯೆಗೆ ವಾಪಸಾಗುತ್ತಿದ್ದಾರೆ. ರಾಮಮಂದಿರ ನಿರ್ಮಾಣದ ಆರಂಭದ ಸಂಕೇತವಾಗಿರುವ 40 ಕೆಜಿ ತೂಕದ ಬೆಳ್ಳಿಯ ಇಟ್ಟಿಗೆ ಇಂದಿನ ಆಕರ್ಷಣೆಯ ಕೇಂದ್ರಬಿಂದುವಾಗಿದೆ.

ಲಕ್ನೋದತ್ತ ಹೊರಟ ಮೋದಿ: ಕಳೆದ ವರ್ಷ ಸುಪ್ರೀಂಕೋರ್ಟ್ ಇತ್ಯರ್ಥಪಡಿಸುವ ತನಕ ವಿವಾದಿತ ಸ್ಥಳವಾಗಿದ್ದ ರಾಮಮಂದಿರ ಜನ್ಮಸ್ಥಳಕ್ಕೆ ರಾಮಮಂದಿರ ನಿರ್ಮಾಣಕ್ಕಾಗಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪ್ರಧಾನಿ ಮೋದಿ 29 ವರ್ಷಗಳ ಬಳಿಕ ಅಯೋಧ್ಯೆಗೆ ವಾಪಸಾಗಿದ್ದಾರೆ.

ಚಿನ್ನದ ಬಣ್ಣದ ಕುರ್ತಾ ಹಾಗೂ ಬಿಳಿಬಣ್ಣದ ಧೋತಿ ಧರಿಸಿದ್ದ ಮೋದಿ ಪ್ರಮುಖ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಶೇಷ ವಿಮಾನದಿಂದ ಹೊಸದಿಲ್ಲಿಯಿಂದ ಲಕ್ನೋಕ್ಕೆ ನಿರ್ಗಮಿಸಿದ್ದಾರೆ.

ಅಯೋಧ್ಯೆ ನಗರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಸಂಪೂರ್ಣ ಸಜ್ಜಾಗಿದ್ದು, ಆಡಳಿತಾರೂಢ ಬಿಜೆಪಿಯು ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸುವ ಮೂಲಕ ತನ್ನ ದಶಕಗಳ ಹಿಂದಿನ ಭರವಸೆಯನ್ನು ಈಡೇರಿಸಲು ಮುಂದಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News