ಯುಪಿಎಸ್‍ಸಿ : ರೈತನ ಪುತ್ರ ದೇಶಕ್ಕೆ ಟಾಪರ್

Update: 2020-08-05 05:06 GMT

ಹೊಸದಿಲ್ಲಿ :  ಮಂಗಳವಾರ ಯುಪಿಎಸ್‍ಸಿ 2019ನೇ ಸಾಲಿನ ಫಲಿತಾಂಶ ಹೊರಬಿದ್ದಾಗ ಸೋನಿಪತ್‍ನ ರೈತ ಕುಟುಂಬವೊಂದರ ಸಂತಸಕ್ಕೆ ಪಾರವೇ ಇರಲಿಲ್ಲ. ಈ ಮನೆಯ ಮಗ, 29 ವರ್ಷದ  ಪ್ರದೀಪ್ ಸಿಂಗ್ ದೇಶಕ್ಕೇ ಟಾಪರ್ ಆಗಿದ್ದುದೇ ಈ ಕುಟುಂಬವನ್ನು ಆನಂದ ಸಾಗರದಲ್ಲಿ ತೇಲಾಡಿಸಿತ್ತು. ಪರೀಕ್ಷೆಯಲ್ಲಿ ತೇರ್ಗಡೆಯಾದ ಒಟ್ಟು 829 ಅಭ್ಯರ್ಥಿಗಳ ಪೈಕಿ ಪ್ರದೀಪ್ ದೇಶಕ್ಕೇ ಮೊದಲನೇ ಸ್ಥಾನ ಪಡೆದಿದ್ದಾರೆ.

ಕಳೆದ ವರ್ಷದ ಫಲಿತಾಂಶದಲ್ಲಿ 260ನೇ ರ್ಯಾಂಕ್ ಗಳಿಸಿದ್ದ ಸಿಂಗ್ ಐಆರ್‍ಎಸ್ ಅಧಿಕಾರಿಗಳಿಗಾಗಿನ ತರಬೇತಿ ಪಡೆಯುತ್ತಿದ್ದರು. ತನ್ನ ಸಾಧನೆಗೆ ತಂದೆಯೇ ಪ್ರೇರಣೆ, ಅವರೇ ನನ್ನ ಸ್ಫೂರ್ತಿಯ ಸೆಲೆ ಎನ್ನುತ್ತಾರೆ ಪ್ರದೀಪ್.

ಅವರ ತಂದೆ ಸುಖಬೀರ್ ಸಿಂಗ್ ಸೋನಿಪತ್‍ನ ತೇವ್ರಿ ಗ್ರಾಮದಲ್ಲಿ ಎಂಟು ಎಕರೆ ಜಮೀನು ಹೊಂದಿದ್ದಾರೆ. ಪ್ರದೀಪ್ ಅವರ ಸಾಧನೆಗೆ ಅವರ ಅವಿರತ ಶ್ರಮವೇ ಕಾರಣ ಎಂದು ತಂದೆ, ತಾಯಿ, ಹಿರಿಯ ಸೋದರ ಹಾಗೂ ಕಿರಿಯ ಸೋದರಿಯಿರುವ ಪ್ರದೀಪ್ ಅವರ ಕುಟುಂಬ ಹೇಳುತ್ತಿದೆ. ಅವರ ಹಿರಿಯ ಸೋದರ ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದರೆ ಸೋದರಿ ಗಣಿತಶಾಸ್ತ್ರದಲ್ಲಿ ಎಂಎಸ್ಸಿ ಪದವೀಧರೆ.

ಪ್ರದೀಪ್ ಪ್ರಾಥಮಿಕ ಶಿಕ್ಷಣವನ್ನು ತಮ್ಮ ಗ್ರಾಮದಲ್ಲಿಯೇ ಪಡೆದಿದ್ದರೆ ಮುಂದೆ ಮಕ್ಕಳ ಉತ್ತಮ ವಿದ್ಯಾಭ್ಯಾಸಕ್ಕಾಗಿ ಸುಖಬೀರ್ ಕುಟುಂಬ ಸೋನಿಪತ್‍ಗೆ ಸ್ಥಳಾಂತರಗೊಂಡಿತ್ತು. ಪ್ರದೀಪ್ ಅವರು 12ನೇ ತರಗತಿ ಪರೀಕ್ಷೆಯಲ್ಲೂ ತಮ್ಮ ತರಗತಿಯಲ್ಲಿ ಟಾಪರ್ ಆಗಿದ್ದರು. ನಂತರ ಅವರು ಬಿಟೆಕ್ ಮಾಡಿ  ಅಬಕಾರಿ ಮತ್ತು ತೆರಿಗೆ ಇಲಾಖೆಯಲ್ಲಿ ಇನ್‍ಸ್ಪೆಕ್ಟರ್ ಆಗಿ ನೇಮಕಗೊಂಡಿದ್ದರು. ಆರಂಭದಲ್ಲಿ ಐಎಎಸ್ ಪರೀಕ್ಷೆಗಾಗಿ ಅವರು ಕೋಚಿಂಗ್ ಪಡೆಯುತ್ತಿದ್ದರೂ ನಂತರ ತಾವಾಗಿಯೇ ಕಲಿಯಲು ಆರಂಭಿಸಿದ್ದರು.

ಓರ್ವ ಐಎಎಸ್ ಅಧಿಕಾರಿಯಾಗಿ ಬಡವರಿಗಾಗಿ ಸೇವೆ ಸಲ್ಲಿಸುತ್ತೇನೆ ಹಾಗೂ ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ಸಿಂಗ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News