ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಶಿವಾಜಿರಾವ್ ಪಾಟೀಲ್ ನಿಧನ

Update: 2020-08-05 06:28 GMT

ಮುಂಬೈ, ಆ.5: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ಧುರೀನ ಶಿವಾಜಿರಾವ್ ಪಾಟೀಲ್ ನೀಲಂಗೇಕರ್ ಬುಧವಾರ ಬೆಳಗ್ಗಿನ ಜಾವ ನಿಧನರಾದರು.

91ರ ಹರೆಯದ ಪಾಟೀಲ್ ಇತ್ತೀಚೆಗಷ್ಟೇ ನೊವೆಲ್ ಕೊರೋನ ವೈರಸ್ ಸೋಂಕಿನಿಂದ ಚೇತರಿಸಿಕೊಂಡಿದ್ದರು ಎಂದು ಕುಟುಂಬಮೂಲಗಳು ತಿಳಿಸಿವೆ.

ಕಳೆದ ತಿಂಗಳು ಕೊರೋನ ಸೋಂಕಿಗೆ ತುತ್ತಾಗಿದ್ದ ಪಾಟೀಲ್‌ರನ್ನು ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ನಾಲ್ಕು ದಿನಗಳ ಹಿಂದೆ ಅವರು ಕೊರೋನ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದರು. ಅವರು ಕಿಡ್ನಿ ಸಂಬಂಧಿತ ಸಮಸ್ಯೆಗಳಿಂದ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಇಂದು ಲಾತೂರ್ ಜಿಲ್ಲೆಯ ನೀಲಂಗದ ಸಮೀಪದ ಪಾಟೀಲರ ಅಂತಿಮ ಸಂಸ್ಕಾರ ನಡೆಸಲಾಗುತ್ತದೆ. ವೈರಸ್ ಕಾಣಿಸಿಕೊಂಡ ಬಳಿಕ ನೀಲಂಗದಿಂದ ಪುಣೆಗೆ ಪಾಟೀಲರನ್ನು ಕರೆತರಲಾಗಿತ್ತು.

ಲಾತೂರ್‌ನ ಪ್ರಭಾವಿ ಸಹಕಾರಿ ನಾಯಕರಾಗಿದ್ದ ಪಾಟೀಲ್ ನೀಲಂಗೇಕರ್ ಜೂನ್ 3,1985ರಿಂದ ಮಾರ್ಚ್ 6 1986ರ ತನಕ ಅಲ್ಪ ಅವಧಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು. 1962ರಿಂದ ಏಳು ಬಾರಿ ನಿಲಂಗ ವಿಧಾನಸಭಾ ಕ್ಷೇತ್ರದಿಂದ ಪಾಟೀಲ್ ಶಾಸಕರಾಗಿ ಆಯ್ಕೆಯಾಗಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಭಾಗವಾಗಿದ್ದರು. ತನ್ನ ಕಟ್ಟುನಿಟ್ಟಿನ ಶಿಸ್ತಿಗೆ ಹೆಸರುವಾಸಿಯಾಗಿದ್ದ ಪಾಟೀಲ್ ಕೊನೆಯ ತನಕವೂ ಸ್ಥಳೀಯ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಕಾಂಗ್ರೆಸ್‌ಗೆ ನಿಷ್ಠರಾಗಿದ್ದ ಅವರು ಸ್ವಾತಂತ್ರ ಹೋರಾಟಗಾರರಾಗಿದ್ದರು.

ಪಾಟೀಲ್ ನಿಧನಕ್ಕೆ ರಾಜ್ಯದಾದ್ಯಂತ ಶೋಕ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News