ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆ : ಕೃತಕ ನೆರೆ, ಜನಜೀವನ ಅಸ್ತವ್ಯಸ್ತ

Update: 2020-08-05 07:16 GMT

ಉಡುಪಿ, ಆ.5: ಕಳೆದ ಮೂರು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಬಿರುಗಾಳಿ ಮಳೆಗೆ ಹಲವೆಡೆ ಕೃತಕ ನೆರೆ ಉಂಟಾಗಿದ್ದು, ಕುಂದಾಪುರದ ನಾವುಂದ, ಬಡಾಕೆರೆ ಗ್ರಾಮಗಳ ಹಲವು ಹಳ್ಳಿಗಳು ಜಲಾವೃತ ಗೊಂಡಿವೆ.

ಅದರಲ್ಲೂ ಮುಖ್ಯವಾಗಿ‌ ಕುಂದಾಪುರ ತಾಲೂಕಿನ ನಾವುಂದ ಗ್ರಾಮದ ಸಾಲ್ಬುಡ, ಬಾಂಗ್ಕುದ್ರು, ಹಡವು ಮುಂತಾದೆಡೆಗಳಲ್ಲಿ ಕಾಣಿಸಿಕೊಂಡ ಕೃತಕ ನೆರೆಗೆ ಗ್ರಾಮಸ್ಥರು ಪರದಾಡುವಂತಾಗಿದೆ. ಮಳೆ ಮುಂದುವರಿದ ಕಾರಣ ನೆರೆ ನೀರು ಏರುತ್ತಲೇ ಇದೆ. ಜನರಿಗೆ ಮಾತ್ರವಲ್ಲದೆ ಜಾನುವಾರುಗಳಿಗೂ ಇದರಿಂದ ತೊಂದರೆಯಾಗಿದೆ. ಈ ಗ್ರಾಮಗಳ ಸಂಪರ್ಕ ಕಲ್ಪಿಸುವ ರಸ್ತೆಗಳು ನೆರೆ ನೀರಿನಿಂದ ಆವೃತಗೊಂಡಿದ್ದು ಜನರು ಹೊರ ಬರುವುದೂ‌ ಕಷ್ಟವಾಗಿದೆ.

ಈ ಭಾಗದ ಕುದ್ರು ಎಂದು ಕರೆಯಲ್ಪಡುವ ನಡುಗಡ್ಡೆಗಳಲ್ಲಿ ಜನರು ಅಕ್ಷರಶಃ ಬಂಧಿಯಾಗಿದ್ದಾರೆ. ಜಿಲ್ಲೆಯಲ್ಲಿ ನಿನ್ನೆಯಿಂದಲೇ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು ,ನದೀಪಾತ್ರದ ಜನ ಜಾಗರೂಕರಾಗಿರುವಂತೆ ಸೂಚನೆ ನೀಡಲಾಗಿದೆ.

ಕಡಲಿಗಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ. ಕಳೆದ ಎರಡು ವಾರಗಳಿಂದ ಮಳೆಗಾಗಿ ಆಕಾಶ ನೋಡುತ್ತಿದ್ದ ಜಿಲ್ಲೆಯ ಜನ ಕಳೆದೆರಡು ದಿನಗಳ ಮಳೆಯಿಂದ ಹೈರಾಣಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News