ಶಿಕ್ಷಕರೂ ಹೊಸಶಿಕ್ಷಣಕ್ಕೆ ಅಪ್‌ಡೇಟ್ ಆಗಬೇಕು: ಅದಮಾರುಶ್ರೀ

Update: 2020-08-05 12:37 GMT

ಉಡುಪಿ, ಆ. 3: ದಿನವೂ ಹೊಸತನಕ್ಕೆ ಹೊಂದಿಕೊಳ್ಳುತ್ತಿರುವ ಶಿಕ್ಷಣ ಕ್ಷೇತ್ರದ ಶಿಕ್ಷಕರೂ ಅಪ್‌ಡೇಟ್ ಆಗಬೇಕಾಗಿದೆ. ವಿದ್ಯಾರ್ಥಿಗಳನ್ನು ಬೌದ್ಧಿಕವಾಗಿ ಮಾತ್ರ ಅಲ್ಲ, ಅವರನ್ನು ದೇಶಾಭಿವೃದ್ಧಿಗೆ ಸಮರ್ಥರನ್ನಾಗಿಸುವ ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥರು ಹೇಳಿದ್ದಾರೆ.

ಉಡುಪಿ ಎಂ.ಜಿ.ಎಂ ಕಾಲೇಜಿನ ನವೀಕೃತ ನೂತನ ರವೀಂದ್ರ ಮಂಟಪದ ಪ್ರಾರಂಭೋತ್ಸವದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಹಿರಿಯರ ತಪ್ಪುಗಳ ಬಗ್ಗೆ ಕಿರಿಯರು ಹೇಳಿದಾಗ ತಿದ್ದಿಕೊಳ್ಳುವ ಹೃದಯ ವೈಶಾಲ್ಯತೆ ಇದ್ದರೆ ಅವರು ಸಮಾಜದ ಆಸ್ತಿಯಾಗುತ್ತಾರೆ ಎಂದರು.

ವಿದ್ಯೆಯ ಜೊತೆಗೆ ವಿದ್ಯಾರ್ಥಿಗಳಲ್ಲಿ ಸ್ವಾಮಿ ಭಕ್ತಿ, ಪಿತೃಭಕ್ತಿ ತುಂಬಿಸಬೇಕು. ತಾಂತ್ರಿಕತೆ ತಲೆಗೆ ತುಂಬುವ ಮುಂಚೆ ಸಂಸ್ಕಾರದ ಬೋಧನೆ ಮಾಡಬೇಕು. ವಿದ್ಯಾರ್ಥಿಗಳಿಗೆ ಪ್ರಿಯರಾಗಲು ಹೊರಡದೆ ತಪ್ಪಿದಾಗ ಕೂಡಲೇ ತಿದ್ದಿ ಹಿತರಾಗಬೇಕು ಎಂದು ಅದಮಾರು ಹಿರಿಯ ಶ್ರೀಗಳು ನುಡಿದರು.

ಮನೆಯೆ ಮೊದಲ ಪಾಠಶಾಲೆ ಎಂಬ ಹಿಂದಿನ ಕಾಲದ ಹಾಡಿನಂತೆ ಈಗ ಮನೆಯಲ್ಲಿಯೇ ಕುಳಿತು ಪಾಠ ಆಲಿಸುವ ಕಾಲ ಕೋವಿಡ್‌ನಿಂದಾಗಿ ಬಂದಿದೆ. ಮನೆಯಲ್ಲಿ ಪೋಷಕರು, ಶಾಲೆಯ ಶಿಕ್ಷಕರು ಇಬ್ಬರಿಗೂ ಯೋಗ್ಯ ಪ್ರಜೆಗಳನ್ನು ಬೆಳೆಸುವ ಜವಾಬ್ದಾರಿ ಇದೆ. ಒಂದರ್ಥದಲ್ಲಿ ವಿದ್ಯಾರ್ಥಿ ಗಳಿಗೆ ಮನೆಯಲ್ಲಿ ಮತ್ತು ಶಾಲೆಯಲ್ಲಿ ಒಟ್ಟು ನಾಲ್ಕು ತಂದೆತಾಯಿಯರು ಇದ್ದಂತೆ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.

ಮಣಿಪಾಲ್ ಟೆಕ್ನಾಲಜೀಸ್ ಲಿ.ನ ಕಾರ್ಯನಿರ್ವಾಹಕ ಅಧ್ಯಕ್ಷ ಟಿ. ಗೌತಮ್ ಪೈ ಮಾತನಾಡಿ, ಕೊರೋನಾದಿಂದಾಗಿ ಎಲ್ಲಾ ಕ್ಷೇತ್ರಗಳು ಅಸ್ತವ್ಯಸ್ತಗೊಂಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಭಾರೀ ಬದಲಾವಣೆ ಅನಿವಾರ್ಯವಾಗಿದೆ. ಹೀಗಾಗಿ ಉಪನ್ಯಾಸಕರುಗಳೆಲ್ಲ ಆಧುನಿಕ ತಂತ್ರಜ್ಞಾನವನ್ನು ಸುರ್ಪಕವಾಗಿ ಬಳಸಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ವಿಜಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಮಾಲತಿ ದೇವಿ ವಂದಿಸಿದರು. ಕನ್ನಡ ವಿಭಾಗ ಮುಖ್ಯಸ್ಥ ಡಾ. ಪುತ್ತಿ ವಸಂತ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಮೇಧಾ ಎನ್. ಭಟ್, ಅನಂತಕೃಷ್ಣ ನಾಯಕ್, ಸಮನ್ವಿ ಅವರನ್ನು ಗೌರವಿಸಲಾಯಿತು.

ಅಪರಾಹ್ನ ನಡೆದ ಕಾರ್ಯಕ್ರಮದಲ್ಲಿ ಎಂ.ಜಿ.ಎಂ ಕಾಲೇಜು ಟ್ರಸ್ಟ್‌ನ ಅಧ್ಯಕ್ಷ ಟಿ. ಮೋಹನದಾಸ ಪೈ ದೀಪಬೆಳಗಿ ಉದ್ಘಾಟಿಸಿದರು. ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ನಿನ ಅಧ್ಯಕ್ಷ ಡಾ. ಎಚ್.ಎಸ್ ಬಲ್ಲಾಳ್, ಉಪಾಧ್ಯಕ್ಷ ಟಿ. ಸತೀಶ್ ಯು. ಪೈ ಉಪಸ್ಥಿತರಿದ್ದರು.

ನೂತನ ರವೀಂದ್ರ ಮಂಟಪದ ಇತಿಹಾಸ: ಡಾ.ಟಿಎಂಎ ಪೈ ಅವರು 1949ರಲ್ಲಿ ಎಂಜಿಎಂ ಕಾಲೇಜನ್ನು ಆರಂಭಿಸಿದರು. 1960ರಲ್ಲಿ ರವೀಂದ್ರ ನಾಥ ಠಾಗೋರರ ಜನ್ಮಶತಾಬ್ದಿ ವರ್ಷದ ಅಂಗವಾಗಿ ರವೀಂದ್ರ ಮಂಟಪವನ್ನು ನಿರ್ಮಿಸಲಾಯಿತು. 1992ರಲ್ಲಿ ವಿಸ್ತರಿತ ನೂತನ ರವೀಂದ್ರ ಮಂಪಟದ ಉದ್ಘಾಟನೆಯಾಯಿತು. ಇದೀಗ 67 ಲಕ್ಷ ರೂ.ವೆಚ್ಚದಲ್ಲಿ ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆಯೊಂದಿಗೆ ಇದನ್ನು ನವೀಕರಿಸ ಲಾಗಿದೆ ಎಂದು ಪ್ರಾಂಶುಪಾಲ ಡಾ.ಎಂ.ಜಿ.ವಿಜಯ್ ಅವರು ಪ್ರಸ್ತಾವನೆಯಲ್ಲಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News