ಉಡುಪಿ ಜಿಲ್ಲೆಯಲ್ಲಿ 173 ಮಂದಿಯಲ್ಲಿ ಕೊರೋನ ಸೋಂಕು ಪತ್ತೆ

Update: 2020-08-05 14:30 GMT

ಉಡುಪಿ, ಆ. 5: ಉಡುಪಿ ಜಿಲ್ಲೆಯಲ್ಲಿ ಬುಧವಾರ ಒಟ್ಟು 173 ಮಂದಿಯಲ್ಲಿ ಕೊರೋನ ವೈರಸ್‌ನ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ದಿನದಲ್ಲಿ 1244 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಾ ವರದಿಗಳು ನೆಗೆಟಿವ್ ಫಲಿತಾಂಶ ನೀಡಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ‌ಚಂದ್ರ ಸೂಡ ತಿಳಿಸಿದ್ದಾರೆ.

ಇಂದು ಕೊರೋನ ಸೋಂಕು ಪತ್ತೆಯಾದ 173 ಮಂದಿಯಲ್ಲಿ ಉಡುಪಿ ತಾಲೂಕಿನ 76 ಮಂದಿ, ಕುಂದಾಪುರ ತಾಲೂಕಿನ 57 ಹಾಗೂ ಕಾರ್ಕಳ ತಾಲೂಕಿನ 39 ಮಂದಿ ಸೇರಿದ್ದಾರೆ. ಉಳಿದ ಒಬ್ಬರು ಹೊರಜಿಲ್ಲೆಯವರಾಗಿದ್ದು, ಜಿಲ್ಲೆಯಲ್ಲಿ ಚಿಕಿತ್ಸೆಗೆ ಬಂದು ಪಾಸಿಟಿವ್ ಆಗಿದ್ದಾರೆ. 99 ಮಂದಿ ಪುರುಷರು, 74 ಮಂದಿ ಮಹಿಳೆಯರಿದ್ದಾರೆ. ಇವರಲ್ಲಿ 65 ಪುರುಷರು ಹಾಗೂ 46 ಮಹಿಳೆಯರಲ್ಲಿ ರೋಗದ ಲಕ್ಷಣಗಳು ಕಂಡು ಬಂದಿಲ್ಲ. ಇಂದಿನ 173 ಪಾಸಿಟಿವ್ ಪ್ರಕರಣಗಳೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಸೋಂಕು ಪತ್ತೆಯಾದವರ ಸಂಖ್ಯೆ 5143ಕ್ಕೇರಿದೆ ಎಂದು ಡಾ.ಸೂಡ ತಿಳಿಸಿದರು.

 ಇಂದು ಕೊರೋನ ಪಾಸಿಟಿವ್ ದೃಢಗೊಂಡ 173 ಮಂದಿಯಲ್ಲಿ 46 ಮಂದಿ ಪಾಸಿಟಿವ್ ಬಂದವರ ಸಂಪರ್ಕದಿಂದ, 73 ಮಂದಿ ಶೀತಜ್ವರದಿಂದ ಬಳಲುತಿದ್ದು ಅವರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಮೂವರು ಪ್ರವಾಸದಿಂದ ಪಾಸಿಟಿವ್ ಬಂದರೆ, 51 ಮಂದಿು ಸಂಪರ್ಕ ತನಿಖೆಯಲ್ಲಿದೆ ಎಂದರು.

124 ಮಂದಿ ಗುಣಮುಖ: ಜಿಲ್ಲೆಯಲ್ಲಿ ಬುಧವಾರ ಒಟ್ಟು 124 ಮಂದಿ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡು ಬಿಡುಗಡೆಗೊಂಡಿದ್ದಾರೆ. ಇವರಲ್ಲಿ 73 ಮಂದಿ ವಿವಿಧ ಕೋವಿಡ್ ಆಸ್ಪತ್ರೆಗಳಿಂದ, 51 ಮಂದಿ ಹೋಮ್ ಐಸೋಲೇಷನ್‌ನಲ್ಲಿದ್ದು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ 3072ಕ್ಕೇರಿದೆ. ಈಗಾಗಲೇ ಪಾಸಿಟಿವ್ ಬಂದ 2027 ಮಂದಿ ಚಿಕಿತ್ಸೆಯಲ್ಲಿದ್ದು, ಇವರಲ್ಲಿ 956 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಹಾಗೂ 1071 ಹೋಮ್ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಡಿಎಚ್‌ಓ ಹೇಳಿದರು.

1853 ಸ್ಯಾಂಪಲ್ ಸಂಗ್ರಹ: ಸೋಂಕಿನ ಪರೀಕ್ಷೆಗಾಗಿ ಇಂದು 1853 ಮಂದಿಯ ಗಂಟಲುದ್ರವದ ಸ್ಯಾಂಪಲ್‌ಗಳನ್ನು ಪಡೆಯಲಾಗಿದೆ. ಇದರಲ್ಲಿ ಕೋವಿಡ್ ಶಂಕಿತರು 1272 ಮಂದಿ, ಕೋವಿಡ್ ಸಂಪರ್ಕಿತರು 311 ಮಂದಿ ಇದ್ದರೆ, ಉಸಿರಾಟ ತೊಂದರೆಯ ಐವರು, ಶೀತಜ್ವರದಿಂದ ಬಳಲುವ 37 ಮಂದಿ ಹಾಗೂ ವಿವಿಧ ಕೋವಿಡ್ ಹಾಟ್‌ಸ್ಪಾಟ್‌ಗಳಿಂದ ಆಗಮಿಸಿದ 228 ಮಂದಿಯ ಸ್ಯಾಂಪಲ್‌ಗಳು ಸೇರಿವೆ ಎಂದು ಡಾ.ಸೂಡ ತಿಳಿಸಿದರು.

ಇಂದು ಪಡೆದ 1853 ಸ್ಯಾಂಪಲ್‌ಗಳೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಮಾದರಿಗಳ ಒಟ್ಟು ಸಂಖ್ಯೆ 38,053ಕ್ಕೇರಿದೆ. ಇವುಗಳಲ್ಲಿ ಈವರೆಗೆ 31,770 ನೆಗೆಟಿವ್, 5143 ಪಾಸಿಟಿವ್ ಬಂದಿವೆ. ಜಿಲ್ಲೆಯಲ್ಲಿ ಈವರೆಗೆ 48 ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಇನ್ನು ಒಟ್ಟು 1140 ಸ್ಯಾಂಪಲ್‌ಗಳ ಪರೀಕ್ಷಾ ವರದಿ ಬರಬೇಕಿದೆ ಎಂದು ಡಾ.ಸೂಡ ವಿವರಿಸಿದರು.

ಜಿಲ್ಲೆಯಲ್ಲಿ ಬುಧವಾರ 173 ಮಂದಿಯನ್ನು ಆಸ್ಪತ್ರೆಗಳ ಐಸೋಲೇಷನ್ ವಾರ್ಡ್‌ಗೆ ದಾಖಲಿಸಲಾಗಿದೆ. ಇವರಲ್ಲಿ ಇಬ್ಬರು ಕೋವಿಡ್ ಕೇರ್ ಸೆಂಟರ್‌ಗಳಲ್ಲಿ, 69 ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿ, 34 ಮಂದಿ ಕೋವಿಡ್ ಹೆಲ್ತ್ ಆಸ್ಪತ್ರೆಗಳಲ್ಲಿ ಹಾಗೂ 68 ಮಂದಿ ಹೋಮ್ ಐಸೋಲೇಷನ್‌ನಲ್ಲಿ ಇದ್ದಾರೆ. ಜಿಲ್ಲೆಯಲ್ಲಿ ಒಟ್ಟು 1317 ಮಂದಿ ಹೋಮ್ ಐಸೋಲೇಷನ್ ನಲ್ಲಿದ್ದಾರೆ ಎಂದು ಅವರು ಹೇಳಿದು.

ಉಡುಪಿ ಜಿಲ್ಲೆಯಲ್ಲಿ ಇಬ್ಬರು ಸಾವು

ಉಡುಪಿ ಜಿಲ್ಲೆಯಲ್ಲಿ ಬುಧವಾರ ಇಬ್ಬರು ಕೋವಿಡ್-19 ಸೋಂಕಿನಿಂದ ಅಧಿಕೃತವಾಗಿ ಮೃತಪಟ್ಟಿರುವ ಮಾಹಿತಿ ಇದೆ. ಕೋಟೇಶ್ವರದ 82ರ ಹರೆಯದ ವೃದ್ಧರೊಬ್ಬರು ನಿನ್ನೆ ರಾತ್ರಿ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಮಣಿಪಾಲ ಕೆಎಂಸಿಯಲ್ಲಿ ಮುದರಂಗಡಿ ಪಿಲಾರಿನ 55ರ ಹರೆಯದ ಮಹಿಳೆಯೊಬ್ಬರೂ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೃತರ ಕುಟುಂಬದ ಮೂಲಗಳು ತಿಳಿಸುವಂತೆ ಕಾಪು ಕೊಪ್ಪಲಂಗಡಿಯ 60ರ ಹರೆಯದ ಪುರುಷರೊಬ್ಬರು ಇಂದು ಮುಂಜಾನೆ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದು, ಪರೀಕ್ಷೆಗೊಳ ಪಡಿಸಿದಾಗ ಅವರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಅದೇ ರೀತಿ ಸಾಸ್ತಾನದ 69 ವರ್ಷ ಪ್ರಾಯದ ವೃದ್ಧರೊಬ್ಬರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮೃತಪಟ್ಟಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News