ದ.ಕ.ಜಿಲ್ಲೆ : ಕೋವಿಡ್‌ಗೆ ಮತ್ತೆ 10 ಬಲಿ; ಹೊಸದಾಗಿ 149 ಮಂದಿಗೆ ಸೋಂಕು

Update: 2020-08-05 14:55 GMT

ಮಂಗಳೂರು, ಆ. 5: ಕೊರೋನ ಸೋಂಕಿತರ ಮರಣದಲ್ಲೂ ಜಿಲ್ಲೆ ದಾಪುಗಾಲು ಇಡುತ್ತಿದೆ. ಮತ್ತೆ 10 ಮಂದಿ ಕೋವಿಡ್‌ಗೆ ಬಲಿಯಾಗುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ 190ಕ್ಕೆ ಏರಿದೆ. ಬುಧವಾರ ಹೊಸದಾಗಿ 149 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಇನ್ನಿಲ್ಲದಂತೆ ಹೋರಾಡುತ್ತಿರುವ ಮಧ್ಯೆಯೇ, ಸೋಂಕಿತರು ಮತ್ತು ಮರಣ ಪ್ರಮಾಣ ಎರಡರಲ್ಲೂ ಏರಿಕೆ ಕಂಡುಬಂದಿದೆ. ಮೃತ 10ರಲ್ಲಿ ಮಂಗಳೂರಿನವರೇ ಏಳು ಮಂದಿ ಇದ್ದಾರೆ. ಪುತ್ತೂರು, ಬೆಳ್ತಂಗಡಿ ತಲಾ ಓರ್ವ ಮೃತಪಟ್ಟಿದ್ದಾರೆ. ಹೊರಜಿಲ್ಲೆಯ ಮತ್ತೋರ್ವ ಸೋಂಕಿಗೆ ಬಲಿಯಾಗಿದ್ದಾರೆ.

149 ಮಂದಿಗೆ ಸೋಂಕು: ದ.ಕ. ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಡುವವರ ಸಂಖ್ಯೆ ಏರುತ್ತಿರುವವರಂತೆಯೇ, ಸೋಂಕಿತರ ಸಂಖ್ಯೆಯಲ್ಲೂ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಬುಧವಾರ ಮತ್ತೆ 149 ಮಂದಿಗೆ ಸೋಂಕು ತಗುಲಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 6,542ಕ್ಕೆ ಏರಿಕೆಯಾಗಿದೆ.

ಹೊಸದಾಗಿ ಸೋಂಕಿತರಾದ 149 ಮಂದಿಯಲ್ಲಿ 46 ಮಂದಿಗೆ ಸೋಂಕು ಎಲ್ಲಿಂದ ಹರಡಿದೆ ಎನ್ನುವುದೇ ಪತ್ತೆಯಾಗಿಲ್ಲ. ಉಳಿದಂತೆ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ 27 ಮಂದಿಗೆ, ಶೀತ-64, ತೀವ್ರ ಉಸಿರಾಟ ತೊಂದರೆ-12 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಬುಧವಾರ ಪತ್ತೆಯಾದ ಸೋಂಕಿತರ ಪೈಕಿ ಮಂಗಳೂರಿನವರದ್ದೇ ಸಿಂಹಪಾಲು ಇದೆ. ಬೆಳ್ತಂಗಡಿ, ಪುತ್ತೂರು, ಬಂಟ್ವಾಳ ಕ್ರಮವಾಗಿ ಸ್ಥಾನ ಪಡೆದಿವೆ. ಮಂಗಳೂರು-79, ಬೆಳ್ತಂಗಡಿ-21, ಪುತ್ತೂರು-20, ಬಂಟ್ವಾಳ-16, ಸುಳ್ಯ-1, ಹೊರಜಿಲ್ಲೆಯ 12 ಮಂದಿಗೆ ಸೋಂಕು ತಗುಲಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

82 ಮಂದಿ ಗುಣಮುಖ: ದ.ಕ. ಜಿಲ್ಲೆಯ ವಿವಿಧ ಆಸ್ಪತ್ರೆಗಳು, ಆರೈಕೆ ಕೇಂದ್ರ, ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಬುಧವಾರ 82 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಕೊರೋನದಿಂದ ಗುಣಮುಖರಾದವರ ಸಂಖ್ಯೆ 3,009ಕ್ಕೆ ಏರಿದೆ. ಜಿಲ್ಲೆಯಲ್ಲಿ 3,343 ಸಕ್ರಿಯ ಪ್ರಕರಣಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News