ಅಯೋಧ್ಯೆಯಲ್ಲಿ ಭೂಮಿ ಪೂಜೆ: ಉಡುಪಿ ವಿವಿದೆಡೆ ಸಂಭ್ರಮಾಚರಣೆ

Update: 2020-08-05 15:16 GMT

ಉಡುಪಿ, ಆ.5: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನಡೆಯುವ ಸಂದರ್ಭದಲ್ಲಿ ಉಡುಪಿಯ ವಿವಿದೆಡೆಗಳಲ್ಲಿ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳು, ಭಜನೆ, ದೇವರಿಗೆ ವಿಶೇಷ ಅಲಂಕಾರ ಮತ್ತು ಪೂಜೆ, ಲಕ್ಷ ತುಳಸೀಅರ್ಚನೆ , ಸಂಭ್ರಮಾಚರಣೆಗಳು ನಡೆದ ಬಗ್ಗೆ ವರದಿಯಾಗಿವೆ.

ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥರು, ಶ್ರೀಕೃಷ್ಣನಿಗೆ ರಾಮನ ಪಟ್ಟಾಭಿಷೇಕ ನೆನಪಿಸು ವಂತೆ ವಿಶೇಷವಾದ ಪಟ್ಟಾಭಿರಾಮನ ಅಲಂಕಾರ ಮಾಡಿದರು. ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯತೀರ್ಥರು ಮಹಾಪೂಜೆಯನ್ನು ನೆರವೇರಿಸಿದರು.

ಇದೇ ವೇಳೆ ರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯರಾಗಿರುವ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರು ತಾವು ಚಾತುರ್ಮಾಸ್ಯ ಆಚರಿಸುತ್ತಿರುವ ಬ್ರಹ್ಮಾವರ ಸಮೀಪದ ನೀಲಾವರ ಗೋಶಾಲೆಯ ಆವರಣದ ಶಾಖಾ ಮಠದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.

ಶಾಖಾ ಮಠದಲ್ಲಿ ನವಗ್ರಹ ಯಾಗ, ಬಳಿತ್ಥಾ ಸೂಕ್ತ ಹೋಮ, ರಾಮತಾರಕ ಮಂತ್ರ ಯಾಗವನ್ನು ವೈದಿಕರಿಂದ ನೆರವೇರಿಸಿದರು. ಮಠದ ಆರಾಧ್ಯಮೂರ್ತಿ ಶ್ರೀರಾಮವಿಠಲ ದೇವರಿಗೆ ಲಕ್ಷೋಪಲಕ್ಷ ತುಲಸೀ ಅರ್ಚನೆಯನ್ನು ವಿಷ್ಣು ಸಹಸ್ರನಾಮಾವಳಿ ಪಠನ ಸಹಿತ ನೆರವೇರಿಸಿದರು. ಬಳಿಕ ಮಂಗಳಾರತಿ ಬೆಳಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭ ಪಟ್ಟದ ದೇವರ ಮಂಟಪದ ಕೆಳಭಾಗದಲ್ಲಿ ತಮ್ಮ ಗುರುಗಳಾದ ಆಯೋಧ್ಯಾ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಶ್ರೀವಿಶ್ವೇಶತೀರ್ಥರ ಭಾವಚಿತ್ರವನ್ನಿಟ್ಟು ತುಲಸಿ ಅರ್ಪಿಸಿ ಗುರುಗಳಿಗೂ ಮಂಗಳಾರತಿ ಬೆಳಗಿ ಗೌರವ ಅರ್ಪಿಸಿದರು. ಗೋವುಗಳಿಗೆ ಗೋಗ್ರಾಸ ಸಮರ್ಪಣೆಯನ್ನೂ ಮಾಡಿದರು. ಇದೇ ವೇಳೆ ಗೋಶಾಲೆಯ ಆವರಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಯಿತು. ಅನಂತರ ಶ್ರೀಗಳು ಅಯೋಧ್ಯೆ ಕಾರ್ಯಕ್ರಮ ವನ್ನು ದೂರದರ್ಶನ ನೇರ ಪ್ರಸಾರದ ಮೂಲಕ ವೀಕ್ಷಿಸಿದರು.

ಉಡುಪಿ ರಥಬೀದಿಯಲ್ಲಿರುವ ಪೇಜಾವರ ಮಠದಲ್ಲಿ ಶ್ರೀವಿಶ್ವೇಶತೀರ್ಥ ಶ್ರೀಪಾದರ ಪೀಠ, ಭಾವಚಿತ್ರಕ್ಕೆ ಬುಧವಾರ ವಿಶೇಷ ಅಲಂಕಾರ ಮಾಡಿ ಮಂಗಳಾರತಿ ಬೆಳಗಿ ಭಕ್ತಿ ಗೌರವ ಅರ್ಪಿಸಲಾಯಿತು. ಮಠದ ದಿವಾನರಾದ ಎಂ ರಘುರಾಮ ಆಚಾರ್ಯ, ಕೊಟ್ಟಾರಿಗಳಾದ ಸಂತೋಷ್ ಹಾಗೂ ಇತರರು ಉಪಸ್ಥಿತರಿದ್ದರು.

ಉಡುಪಿ ಶ್ರೀಕೃಷ್ಣ ಮಠದ ಕನಕನ ಕಿಂಡಿಯ ಎದುರು, ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರಕ್ಕೆ ಭೂಮಿಪೂಜೆಯ ಕಾರ್ಯಕ್ರಮದ ಪ್ರಯುಕ್ತ ಬಜರಂಗದಳದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಬಜರಂಗದಳದ ರಾಜ್ಯಾಧ್ಯಕ್ಷ ಸುನಿಲ್ ಕೆ.ಆರ್.ಭಾಗವಹಿಸಿದ್ದರು.

ಉಡುಪಿಯ ಶ್ರೀ ಪಲಿಮಾರು ಮಠದಲ್ಲಿ ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಶ್ರೀ ರಾಮಮಂದಿರಕ್ಕೆ ಭೂಮಿಪೂಜೆ ನಡೆಯುತ್ತಿರುವ ಸಂದರ್ಭದಲ್ಲಿ ಭಕ್ತಾಧಿಗಳಿಂದ ಭಜನೆ, ಪಾರಾಯಣ ಹಾಗೂ ಪಲಿಮಾರುಶ್ರೀಗಳಿಂದ ವಿಶೇಷ ಪೂಜೆ ನೆರವೇರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News