ಉಡುಪಿ: ತಗ್ಗಿದ ಮಳೆಯ ಪ್ರಮಾಣ, ಜನಜೀವನ ಸಾಮಾನ್ಯಕ್ಕೆ

Update: 2020-08-05 16:46 GMT

ಬೈಂದೂರಿನಿಂದ ನೆರೆ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು

ಉಡುಪಿ, ಆ.5: ಕಳೆದ ಮೂರು ದಿನಗಳಿಂದ ಉಡುಪಿ ಜಿಲ್ಲೆಯ ಬೈಂದೂರು ಮತ್ತು ಕುಂದಾಪುರ ತಾಲೂಕುಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪ್ರಮಾಣ ಇಂದು ಸ್ವಲ್ಪ ತಗ್ಗಿದ್ದು, ಇದರಿಂದ ಹಲವು ಗ್ರಾಮಗಳಲ್ಲಿ ನಿನ್ನೆಯಿಂದ ಕಾಣಿಸಿಕೊಂಡ ನೆರೆ ಇಳಿದು ಸಂಜೆಯ ವೇಳೆಗೆ ಜನಜೀವನ ಮತ್ತೆ ಸಾಮಾನ್ಯಕ್ಕೆ ಮರಳುತ್ತಿದೆ.

ಈ ಎರಡು ತಾಲೂಕಿನ ಅನೇಕ ಕಡೆಗಳಲ್ಲಿ ನದಿ ತುಂಬಿ ಹರಿದು ತಗ್ಗು ಪ್ರದೇಶಗಳು, ಕುದ್ರು ಪ್ರದೇಶಗಳಲ್ಲಿ ನೆರೆ ಕಾಣಿಸಿಕೊಂಡಿತ್ತು. ನಾವುಂದ, ಬಡಾಕೆರೆ, ಮರವಂತೆ, ನಾಡ, ಹಡವು, ಪಡುಕೋಣೆ, ಅರೆಹೊಳೆ, ಸೇನಾಪುರಗಳಲ್ಲಿ ನೆರೆ ಕಾಣಿಸಿಕೊಂಡಿದ್ದು, ಜನರು ತುರ್ತು ಸಂದರ್ಭ ದೋಣಿ ಯನ್ನು ಸಂಚಾರಕ್ಕೆ ಬಳಸಬೇಕಾಯಿತು.

ಇದರೊಂದಿಗೆ ಹಲವು ಕಡೆಗಳಲ್ಲಿ ಕೃತಕ ನೆರೆಯೂ ಉಂಟಾಗಿದ್ದು, ಸಂಪರ್ಕ ರಸ್ತೆಗಳೆಲ್ಲವೂ ನೀರಿನಲ್ಲಿ ಮುಳುಗಿ ಹೋದವು. ಹಲವು ಹಳ್ಳಿಗಳು ಜಲಾವೃತ ಗೊಂಡಿವೆ. ಅದರಲ್ಲೂ ಮುಖ್ಯವಾಗಿ ಕುಂದಾಪುರ ತಾಲೂಕಿನ ನಾವುಂದ ಗ್ರಾಮದ ಸಾಲ್ಬುಡ, ಹಡವು ಮುಂತಾದೆಡೆಗಳಲ್ಲಿ ಕಾಣಿಸಿ ಕೊಂಡ ಕೃತಕ ನೆರೆಗೆ ಗ್ರಾಮಸ್ಥರು ಪರದಾಡುವಂತಾಗಿದೆ.ಜನರಿಗೆ ಮಾತ್ರವಲ್ಲದೆ ಜಾನುವಾರುಗಳಿಗೂ ಇದರಿಂದ ತೊಂದರೆಯಾಗಿದೆ.

ಜಿಲ್ಲಾಧಿಕಾರಿ ಭೇಟಿ: ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಇಂದು ಬೈಂದೂರು ಹಾಗೂ ಕುಂದಾಪುರ ತಾಲೂಕುಗಳ ನೆರೆ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ಮಾಡಿದರು. ಇನ್ನು ಮಳೆ ಬರುವ ಸಾಧ್ಯತೆ ಇರುವುದಿಂದ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ, ಕೂಡಲೇ ಪರಿಹಾರ ಕ್ರಮ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.

ಈ ಭಾಗದ ಕುದ್ರು ಎಂದು ಕರೆಯಲ್ಪಡುವ ನಡುಗಡ್ಡೆಗಳಲ್ಲಿ ಜನರು ಅಕ್ಷರಶಃ ಬಂಧಿಯಾಗಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ ರೆಡ್‌ಅಲರ್ಟ್ ಘೋಷಿಸಲಾಗಿದ್ದು ನದೀಪಾತ್ರಗಳ ಜನರು ಜಾಗರೂಕರಾಗಿರುವಂತೆ ಸೂಚನೆ ನೀಡಲಾಗಿದೆ. ಕಡಲಿಗಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.

ಮನೆಗಳಿಗೆ ಹಾನಿ: ಜಿಲ್ಲೆಯಲ್ಲಿ ಧಾರಾಕಾರ ಮಳೆಯೊಂದಿಗೆ ಆಗಾಗ ಬಲವಾದ ಗಾಳಿಯೂ ಬೀಸುತ್ತಿರುವುದರಿಂದ ಜಿಲ್ಲೆಯಾದ್ಯಂತ ಭಾರಿ ಹಾನಿ ಸಂಭವಿಸಿದ ವರದಿಗಳು ಬರುತ್ತಿವೆ.

ಕಾರ್ಕಳ ತಾಲೂಕಿನ ರೆಂಜಾಳ ಗ್ರಾಮದ ಸಂಜೀ ಎಂಬವರ ಮನೆಯ ಹೆಂಚು . ತಗಡು, ರೀಪು ಪಕ್ಕಾಸಿಗಳು ಕಳೆದ ರಾತ್ರಿ ಬೀಸಿದ ಗಾಳಿಗೆ ಹಾರಿಹೋಗಿದ್ದು ಒಂದು ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ. ಉಡುಪಿ ತಾಲೂಕಿನ ಉದ್ಯಾವರದಲ್ಲಿ ಲೀಲಾ ಪೂಜಾರ್ತಿ ಎಂಬವರ ಮನೆ ಮೇಲೆ ಹಲಸಿನ ಮರ ಬಿದ್ದು ಭಾಗಶ: ಹಾನಿಯಾಗಿದ್ದು 12 ಸಾವಿರ ರೂ.ನಷ್ಟವಾಗಿದೆ.

ಬೈಂದೂರು ತಾಲೂಕು: ಬೈಂದೂರು ತಾಲೂಕಿನಲ್ಲಿ ಇಂದು 15ಕ್ಕೂ ಅಧಿಕ ಮನೆಗಳಿಗೆ ವಿವಿಧ ಕಾರಣಗಳಿಂದ ಹಾನಿಯಾದ ವರದಿ ಬಂದಿವೆ. 7 ಮನೆಗಳು ಬಿದ್ದುಹೋಗಿದ್ದರೆ, ಕೊಲ್ಲೂರಿನಲ್ಲಿ 2, ಕಿರಿಮಂಜೇಶ್ವರದಲ್ಲಿ 10, ಯಡ್ತರೆ ಮತ್ತು ನಾವುಂದಗಳಲ್ಲಿ ಒಂದು ಮನೆಗಳಿಗೆ ಭಾಗಶ: ಹಾನಿಯಾಗಿದ್ದು ಒಟ್ಟು ಸುಮಾರು ಎರಡು ಲಕ್ಷ ರೂ. ನಷ್ಟದ ಅಂದಾಜು ಮಾಡಲಾಗಿದೆ ಎಂದು ಬೈಂದೂರು ತಹಶೀಲ್ದಾರ್ ಬಸಪ್ಪ ಪೂಜಾರ್ ತಿಳಿಸಿದ್ದಾರೆ.

ಬ್ರಹ್ಮಾವರ ತಾಲೂಕು: ಬ್ರಹ್ಮಾವರ ತಾಲೂಕಿನ ಕಾಡೂರು ಗ್ರಾಮದ ನಿರ್ಮಕ್ಕಿ ಎಂಬಲ್ಲಿ ಗೋವಿಂದ ನಾಯ್ಕಿ ಹಾಗೂ ಹೊಸಾಳ ಗ್ರಾಮದ ಕೃಷ್ಣ ಬಂಗೇರ ಎಂಬವರ ಮನೆ ಹಾಗೂ ಹಟ್ಟಿಗೆ ಹಾನಿಯಾಗಿದ್ದು, ತಲಾ 30 ಸಾವಿರ ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ.

ಕುಂದಾಪುರ ತಾಲೂಕು: ತಾಲೂಕಿನ ಗೋಪಾಡಿ, ಅಸೋಡು, ಕೋಟೇಶ್ವರ, ಕಂದಾವರ, ವಡೇರಹೋಬಳಿ, ಕೊರ್ಗಿ, ಕುಂಭಾಶಿ, ಯಡ್ಯಾಡಿ ಮತ್ಯಾಡಿ, ಮೊಳಹಳ್ಳಿ, ಹಕ್ಲಾಡಿ, ಕುಂದಬಾರಂದಾಡಿ ಗ್ರಾಮಗಳಲ್ಲಿ 16ಕ್ಕೂ ಅಧಿಕ ಮನೆಗಳಿಗೆ ನಿನ್ನೆ ಮತ್ತು ಇಂದು ಮಳೆ-ಗಾಳಿಯಿಂದ ಭಾಗಶ: ಹಾಗೂ ಪೂರ್ಣ ಹಾನಿಯಾಗಿದ್ದು, ನಾಲ್ಕು ಲಕ್ಷ ರೂ.ಗಳಿಗೂ ಅಧಿಕ ಹಾನಿಯ ಅಂದಾಜು ಮಾಡಲಾಗಿದೆ. ಅಲ್ಲದೇ ಹೊಸಂಗಡಿ ಗ್ರಾಮದ ರಾಮ ನಾಯ್ಕ ಹಾಗೂ ಕುಳಂಜೆ ಗ್ರಾಮದ ಮಂಜಯ್ಯ ಶೆಟ್ಟಿ ಇವರ ತೋಟಗಾರಿಕಾ ಬೆಳೆಗಳಿಗೆ ಗಾಳಿಯಿಂದ ಅಪಾರ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಇಂದು ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾ ನಿಯಂತ್ರಣ ಕೊಠಡಿ ನೀಡಿರುವ ಮಾಹಿತಿಯಂತೆ ಇಂದು ಮುಂಜಾನೆಯವರೆಗೆ ಜಿಲ್ಲೆಯ ವಿವಿದೆಡೆಗಳಲ್ಲಿ ಮಳೆಯಿಂದ ಹಾನಿಯ ಒಟ್ಟು 25 ಪ್ರಕರಣಗಳು ವರದಿಯಾಗಿದ್ದು, ಇವುಗಳಿಂದ ಒಟ್ಟು ಎಂಟು ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ನಷ್ಟ ಸಂಭವಿಸಿದೆ.

ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಕಲೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 49ಮಿ.ಮೀ. ಮಳೆಯಾಗಿದೆ. ಉಡುಪಿಯಲ್ಲಿ 32, ಕುಂದಾ ಪುರದಲ್ಲಿ 64 ಹಾಗೂ ಕಾರ್ಕಳದಲ್ಲಿ 52ಮಿ.ಮೀ. ಮಳೆಯಾದ ವರದಿ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News