ದ.ಕ. ಜಿಲ್ಲೆಯಲ್ಲಿ ಮುಂದುವರಿದ ಮಳೆ : ನದಿಪಾತ್ರದಲ್ಲಿ ಪ್ರವಾಹ ಭೀತಿ

Update: 2020-08-05 17:02 GMT

ಮಂಗಳೂರು, ಆ. 5: ಕರಾವಳಿ ಪ್ರದೇಶವಾದ ದ.ಕ. ಜಿಲ್ಲೆಯಲ್ಲಿ ಬುಧವಾರವೂ ತನ್ನ ವರ್ಷಧಾರೆಯನ್ನು ಮುಂದುವರಿಸಿದೆ. ಜಿಲ್ಲೆಯ ವಿವಿಧೆಡೆ ಭಾರೀ ಗಾಳಿ-ಮಳೆಯಿಂದಾಗಿ ಗಿಡ-ಮರ, ವಿದ್ಯುತ್ ಕಂಬಗಳು ಧರಾಶಾಹಿಯಾಗಿ ಜನಜೀವನ ಅಸ್ತವ್ಯಸ್ತಗೊಂಡಿತು.

ಹವಾಮಾನ ಇಲಾಖೆಯಿಂದ ಜಿಲ್ಲೆಯಲ್ಲಿ ಬುಧವಾರ ‘ರೆಡ್ ಅಲರ್ಟ್’ ಘೋಷಿಸಲಾಗಿತ್ತು. ಇದರ ಹೊರತಾಗಿಯೂ, ಜಿಲ್ಲೆಯಲ್ಲಿ ಅಧಿಕ ಪ್ರಮಾಣದ ಮಳೆ ಬಿದ್ದಿದೆ. ನದಿಗಳು ಅಪಾಯಕಾರಿ ಮಟ್ಟದಲ್ಲಿ ತುಂಬಿ ಹರಿಯುತ್ತಿವೆ. ಇದರಿಂದ ಸಹಜವಾಗಿಯೇ ನದಿಪಾತ್ರದ ಪ್ರದೇಶದಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ಮಂಗಳೂರು ನಗರದ ಹೊರವಲಯದ ಗುರುಪುರ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಭಾರೀ ಗಾಳಿ ಮಳೆಗೆ ಗುರುಪುರ ಫಲ್ಗುಣಿ ನದಿ ತುಂಬಿ ಹರಿಯುತ್ತಿದೆ. ವಿವಿಧ ಪ್ರದೇಶಗಳಲ್ಲಿ ಗಿಡ-ಮರಗಳು ಹಾಗೂ ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ. ಪರಿಣಾಮ, ವಿದ್ಯುತ್ ಕಣ್ಣಾಮುಚ್ಚಾಲೆ ಮುಂದುವರಿದಿದೆ.

ಗುರುಪುರ-ಕೈಕಂಬದ ಗ್ಯಾರೇಜ್ ಬಳಿ ಬೃಹತ್ ಮರದ ಕೊಂಬೆ ಬಿದ್ದು ಕೆಲವು ವಿದ್ಯುತ್ ಕಂಬಗಳು ಮುರಿದಿವೆ. ಬುಧವಾರ ಸಂಜೆಯವರೆಗೂ ವಿದ್ಯುತ್ ಕೈಕೊಟ್ಟಿದೆ. ಅಲ್ಲಲ್ಲಿ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಎಡಪದವಿನಲ್ಲಿ ಟ್ರಾನ್ಸ್‌ಫಾರ್ಮರ್‌ಗೆ ಹಾನಿ ಉಂಟಾಗಿದೆ. ಇದರಿಂದ ಮೆಸ್ಕಾಂಗೆ ಲಕ್ಷಾಂತರ ರೂ. ನಷ್ಟವಾಗಿದೆ ಎಂದು ತಿಳಿದುಬಂದಿದೆ.

ಗುರುಪುರ ಸಮೀಪದ ವಿಕಾಸ್‌ನಗರ, ಗುರುಪುರ ದೋಣಿಂಜೆಯಲ್ಲೂ ಮರ ಉರುಳಿದೆ. ಮಳಲಿಯ ಜೈನ ಬಸದಿಯ ಕಂಪೌಂಡ್ ಮೇಲೆ ಮರ ಬಿದ್ದು, ರಸ್ತೆ ಬಂದ್ ಆಗಿದೆ. ವಿದ್ಯುತ್ ಪುನರ್ ಸಂಪರ್ಕಕ್ಕಾಗಿ ಮೆಸ್ಕಾಂ ಸಿಬ್ಬಂದಿ ಸಮರೋಪಾದಿಯಲ್ಲಿ ಕಾರ್ಯನಿರತರಾಗಿದ್ದಾರೆ.

ಬೈಕಂಪಾಡಿಯಲ್ಲಿ ಅಪಾರ ಹಾನಿ: ಬೈಕಂಪಾಡಿ ಪ್ರದೇಶದಲ್ಲಿ ಮಂಗಳವಾರ ರಾತ್ರಿಯಿಡೀ ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ಅಪಾರ ಹಾನಿಯಾಗಿದೆ. ಮರ ಬಿದ್ದು, ಹಲವು ಮನೆಗಳು ಜಖಂಗೊಂಡಿದೆ. ಬೈಕಂಪಾಡಿ ಎಪಿಎಂಸಿ ಆವರಣದಲ್ಲಿ ಅಪಾಯಕಾರಿ ಮರ ತೆರವಿಗೆ ಸಾರ್ವಜನಿಕರು ನಿರಂತರವಾಗಿ ಮನವಿ ಮಾಡಿದ್ದರೂ ಎಪಿಎಂಸಿ ಆಡಳಿತವು ನಿರ್ಲಕ್ಷ ವಹಿಸಿದೆ ಎನ್ನುವ ಆರೋಪ ಕೇಳಿಬಂದಿದೆ.

ಈ ಪ್ರದೇಶದಲ್ಲಿ ಸಣ್ಣ-ಪುಟ್ಟ ಮರಗಳನ್ನು ತೆರವುಗೊಳಿಸಲಾಗಿದ್ದರೂ ದೊಡ್ಡ ಮರಗಳನ್ನು ಹಾಗೆಯೇ ಉಳಿಸಲಾಗಿತ್ತು. ಮಂಗಳವಾರ ರಾತ್ರಿ ಬೀಸಿದ ತೀವ್ರ ಬಿರುಗಾಳಿಗೆ ಇಲ್ಲಿನ ಬೃಹತ್ ಮರವೊಂದು ಉರುಳಿ, ಪಕ್ಕದಲ್ಲೇ ಇರುವ ಮನೆಗಳ ಮೇಲೆ ಬಿದ್ದಿದೆ. ಇದರಿಂದ ಹಸನಬ್ಬ ಎಂಬವರ ಮನೆ ತೀವ್ರ ಜಖಂ ಆಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರಿಗೆ ಯಾವುದೇ ಜೀವಹಾನಿಯಾಗಿಲ್ಲ.

ಎಪಿಎಂಸಿಯ ತಡೆಗೋಡೆ ಪಕ್ಕದಲ್ಲಿ ಅಂಗರಗುಂಡಿಯ ಹಲವು ಮನೆಗಳಿವೆ. ಇಲ್ಲಿ ರಾಜಕಾಲುವೆಯೂ ಪಕ್ಕದಲ್ಲೇ ಹರಿಯುತ್ತಿದ್ದು, ಪ್ರತೀವರ್ಷ ಇಲ್ಲಿ ಮರ ಬೀಳುವುದು, ಕಂಪೌಂಡ್ ಕುಸಿಯುವುದು, ಮಳೆನೀರು ಮನೆಗೆ ನುಗ್ಗುವ ಘಟನೆಗಳು ನಡೆಯುತ್ತಿವೆ. ಮಳೆಗಾಲದಲ್ಲಿ ಸ್ಥಳೀಯರು ಆತಂಕದಲ್ಲೇ ಬದುಕುವಂತಾಗಿದೆ ಎಂದು ಸ್ಥಳೀಯ ನಿವಾಸಿ ಅಜರುದ್ದೀನ್ ಆತಂಕ ವ್ಯಕ್ತಪಡಿಸಿದ್ದಾರೆ.

ತುಂಬಿಹರಿದ ನದಿಗಳು: ನೇತ್ರಾವತಿ ಹಾಗೂ ಕುಮಾರಧಾರ ನದಿಗಳ ಹರಿವಿನಲ್ಲೂ ಅಗಾಧ ಏರಿಕೆ ಕಂಡುಬಂದಿದೆ. ಮಂಗಳವಾರ 5.9 ಮೀಟರ್ ಇದ್ದ ನೇತ್ರಾವತಿ ನದಿಯ ಮಟ್ಟವು ಬುಧವಾರ 7.4 ಮೀಟರ್‌ಗೆ ಏರಿಕೆಯಾಗಿದೆ. ಅದರಂತೆ, 16 ಮೀಟರ್ ಇದ್ದ ಕುಮಾರಧಾರ ನದಿಯು 22 ಮೀಟರ್‌ಗೆ ಹೆಚ್ಚಳವಾಗಿದೆ. ಗುರುಪುರ ಸಮೀಪದ ಫಲ್ಗುಣಿ ನದಿಯಲ್ಲೂ ಮಳೆನೀರಿನ ಭಾರೀ ಹರಿವು ಇದೆ. ನೆರೆಯ ಭೀತಿ ಯಿಂದಾಗಿ ನದಿ ಸುತ್ತಮುತ್ತಲಿನ ಗ್ರಾಮಗಳ ಜನತೆಯು ಆತಂಕದಲ್ಲಿ ಹಗಲು-ರಾತ್ರಿ ದೂಡುವಂತಾಗಿದೆ.

1077 ಕರೆ ಮಾಡಿ: ದ.ಕ. ಜಿಲ್ಲೆಯಲ್ಲಿ ಉಂಟಾಗುವ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳು ಇದ್ದಲ್ಲಿ ತುರ್ತು ಸೇವೆಗಾಗಿ ಟಾಲ್‌ಫ್ರೀ ನಂಬರ್ 1077ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

ಕಡಲು ಪ್ರಕ್ಷುಬ್ಧ

ಅರಬಿ ಸಮುದ್ರ ಪ್ರಕ್ಷುಬ್ಧಗೊಂಡ ಹಿನ್ನೆಲೆಯಲ್ಲಿ ಭಾರೀ ಗಾತ್ರದ ಅಲೆಗಳು ಕಡಲತೀರಕ್ಕೆ ಬಂದು ಅಪ್ಪಳಿಸುತ್ತಿವೆ. ಪಣಂಬೂರು ಕೂರಿಕಟ್ಟದಲ್ಲಿ ಮನೆ ಉಳಿಸಿಕೊಳ್ಳಲು ಮರಳಿನ ಚೀಲವನ್ನು ಅಳವಡಿಸಿ ತಮಿಳುನಾಡು ಮೂಲದ ಕುಟುಂಬವೊಂದು ಹರಸಾಹಸ ಪಡುತ್ತಿದ್ದ ಬುಧವಾರ ಘಟನೆ ನಡೆದಿದೆ. ಸಮುದ್ರದ ಅಬ್ಬರ ಹೆಚ್ಚಳದಿಂದಾಗಿ ತೀರದಲ್ಲಿನ ಕಲ್ಲಿನ ತಡೆಗೋಡೆ ದಾಟಿ ಅಲೆಗಳು ಧಾವಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News